ADVERTISEMENT

ಕಲಬುರಗಿ–ಹೈದರಾಬಾದ್ ಮಧ್ಯೆ ವಿಮಾನ ಹಾರಾಟ ಆರಂಭ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 14:00 IST
Last Updated 18 ಏಪ್ರಿಲ್ 2022, 14:00 IST
ಹೈದರಾಬಾದ್‌ನಿಂದ ಕಲಬುರಗಿಗೆ ಬಂದ ಅಲಯನ್ಸ್ ಏರ್ ವಿಮಾನವನ್ನು ಸಂಸದ ಡಾ. ಉಮೇಶ ಜಾಧವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಹಾಗೂ ವಿಮಾನದ ಪೈಲಟ್‌ಗಳು ಇದ್ದರು
ಹೈದರಾಬಾದ್‌ನಿಂದ ಕಲಬುರಗಿಗೆ ಬಂದ ಅಲಯನ್ಸ್ ಏರ್ ವಿಮಾನವನ್ನು ಸಂಸದ ಡಾ. ಉಮೇಶ ಜಾಧವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಹಾಗೂ ವಿಮಾನದ ಪೈಲಟ್‌ಗಳು ಇದ್ದರು   

ಕಲಬುರಗಿ: ಸರ್ಕಾರಿ ಒಡೆತನದ ಅಲಯನ್ಸ್‌ ಏರ್‌ ವಿಮಾನ ಸಂಸ್ಥೆಯು ಸೋಮವಾರ ಕಲಬುರಗಿ–ಹೈದರಾಬಾದ್ ಮಧ್ಯೆ ವಿಮಾನ ಸೇವೆ ಆರಂಭಿಸಿದ್ದು, ಹೈದರಾಬಾದ್‌ನಿಂದ ಮಧ್ಯಾಹ್ನ 3.40ಕ್ಕೆ ಹೊರಟ ವಿಮಾನ ಸಂಜೆ 4.30ಕ್ಕೆ ಕಲಬುರಗಿ ತಲುಪಿತು.

ಮತ್ತೆ ಸಂಜೆ 5ಕ್ಕೆ ಕಲಬುರಗಿಯಿಂದ ಹೊರಟ ವಿಮಾನ 5.50ಕ್ಕೆ ಹೈದರಾಬಾದ್‌ಗೆ ಮರಳಿತು. ಹೈದರಾಬಾದ್‌ನ ರಾಜೀವಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶದ ಪ್ರಮುಖ ನಗರಗಳು ಹಾಗೂ ವಿದೇಶಗಳಿಗೆ ತೆರಳಲು ಸಾಕಷ್ಟು ವಿಮಾನಗಳು ಇರುವುದರಿಂದ ಕಲಬುರಗಿಯಿಂದ ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸಲು ಪ್ರಯಾಣಿಕರು ಒತ್ತಾಯಿಸಿದ್ದರು. ಹೀಗಾಗಿ, ಅಲಯನ್ಸ್‌ ಏರ್ ಸಂಸ್ಥೆಯು ಸೋಮವಾರದಿಂದ ವಿಮಾನ ಸಂಚಾರ ಆರಂಭಿಸಿದ್ದು, ಪ್ರತಿ ನಿತ್ಯ ಸಂಚರಿಸಲಿವೆ. ಕಲಬುರಗಿಯಿಂದ ಹೈದರಾಬಾದ್‌ಗೆ ₹ 2,356 ಹಾಗೂ ಹೈದರಾಬಾದ್‌ನಿಂದ ಕಲಬುರಗಿಗೆ ₹ 2,846 ಹಾಗೂ ಮೂಲ ದರವನ್ನು ನಿಗದಿಪಡಿಸಲಾಗಿದೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಡಾ. ಉಮೇಶ ಜಾಧವ, ‘ಈ ವಿಮಾನವು ಗೋವಾದಿಂದ ಬೆಳಿಗ್ಗೆ ಹೊರಟು ಮಧ್ಯಾಹ್ನ ಹೈದರಾಬಾದ್‌ ತಲುಪಲಿದ್ದು, ಅಲ್ಲಿಂದ ಕಲಬುರಗಿಗೆ ಬರಲಿದೆ. ಹೀಗಾಗಿ, ಗೋವಾದಿಂದ ಪ್ರಯಾಣಿಕರು ಇಲ್ಲಿಗೆ ಬರಬಹುದು. ಕಲಬುರಗಿ–ಹೈದರಾಬಾದ್ ಮಧ್ಯೆ ವಿಮಾನ ಸಂಚಾರ ಆರಂಭಿಸಬೇಕು ಎನ್ನುವುದು ಹಲವು ದಿನಗಳ ಬೇಡಿಕೆಯಾಗಿತ್ತು. ಅದೀಗ ಈಡೇರಿದೆ’ ಎಂದರು.

ADVERTISEMENT

ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ವಿಮಾನ ನಿಲ್ದಾಣ ನಿರ್ದೇಶಕ ಯಶವಂತ ಗುರುಕರ್ ಇದ್ದರು.

ಮೊದಲ ದಿನ ಹೈದರಾಬಾದ್‌ನಿಂದ ಹೊರಟ ವಿಮಾನದಲ್ಲಿ ಇಬ್ಬರು ಕಲಬುರಗಿಗೆ ಪ್ರಯಾಣಿಸಿದರೆ, ಕಲಬುರಗಿಯಿಂದ 7 ಜನ ಹೈದರಾಬಾದ್‌ಗೆ ಪ್ರಯಾಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.