ADVERTISEMENT

ಎಚ್‌ಕೆಸಿಸಿಐ ಚುನಾವಣೆಗೆ ಹೊಸ ನೋಟಿಫಿಕೇಶನ್‌

ಕಲಬುರ್ಗಿ ಹೈಕೋರ್ಟ್ ಪೀಠದ ಆದೇಶ ಪಾಲನೆ: ಚುನಾವಣಾಧಿಕಾರಿ ಬಸವರಾಜ ಇಂಗಿನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 10:39 IST
Last Updated 19 ಫೆಬ್ರುವರಿ 2021, 10:39 IST
ಬಸವರಾಜ ಇಂಗಿನ್‌
ಬಸವರಾಜ ಇಂಗಿನ್‌   

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಚುನಾವಣೆಗೆ ಹೊಸದಾಗಿ ನೋಟಿಫಿಕೇಶನ್‌ ಹೊರಡಿಸಬೇಕು ಎಂದು ಕಲಬುರ್ಗಿ ಹೈಕೋರ್ಟ್‌ ಪೀಠ ಆದೇಶ ನೀಡಿದೆ. ಅದರಂತೆ, ಇನ್ನೆರಡು ದಿನಗಳಲ್ಲಿ ಇಡೀ ಚುನಾವಣೆಯ ಕ್ಯಾಲೆಂಡರ್‌ ಆಧರಿಸಿದ ಹೊಸ ನೋಟಿಫಿಕೇಶನ್‌ ಹೊರಡಿಸಲಾಗುವುದು’ ಎಂದು ಚುನಾವಣಾಧಿಕಾರಿ ಬಸವರಾಜ ಇಂಗಿನ್‌ ಹೇಳಿದರು.

‘ಮಾರ್ಚ್‌ 21ರೊಳಗೆ ಚುನಾವಣಾ ಪ್ರಕ್ರಿಯೆಗಳು ಮುಗಿಯಬೇಕು ಎಂದು ಕೋರ್ಟ್‌ ತಿಳಿಸಿದೆ. ಈ ಆದೇಶ ಹಾಗೂ ಎಚ್‌ಕೆಸಿಸಿಐ ಬೈಲಾದಲ್ಲಿ ಇರುವ ಎಲ್ಲ ನಿಯಮಗಳನ್ನು ಚಾಚೂ– ತಪ್ಪದೇ ಪಾಲಿಸಲಾಗುವುದು. ಈ ಹಿಂದೆ ನೋಟಿಫಿಕೇಶನ್‌ ಹೊರಡಿಸುವ ಅಧಿಕಾರ ಸಂಸ್ಥೆಯ ಕಾರ್ಯದರ್ಶಿಗೆ ಮಾತ್ರ ಇತ್ತು. ಆದರೆ, ಈಗ ಚುನಾವಣಾಧಿಕಾರಿಯೇ ನೋಟಿಫಿಕೇಶನ್‌ ಹೊರಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆ ಪ್ರಕಾರ ಹೊಸ ನೋಟಿಫಿಕೇಶನ್‌ ಅನ್ನು ನಾನೇ ಹೊರಡಿಸುತ್ತೇನೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2020ರ ಮಾರ್ಚ್‌ 29ರಂದು ಚುನಾವಣೆ ನಡೆಸಲು ಉದ್ದೇಶಿಸಲಾಗಿತ್ತು. ಲಾಕ್‌ಡೌನ್‌ ಘೋಷಣೆಯಾದ ಕಾರಣ ಜಿಲ್ಲಾಡಳಿತದ ಆದೇಶದಂತೆ ಮುಂದೂಡಲಾಗಿತ್ತು. ನಂತರ 2021ರ ಜ. 30ರಿಂದ ಫೆ. 14ರೊಳಗೆ ಚುನಾವಣೆ ಮುಗಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ತಮಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ 39 ಮಂದಿ ಹೈಕೋರ್ಟ್‌ ಮೊರೆ ಹೋದರು. ಹೊಸಬರಿಗೂ ಅವರಕಾಶ ನೀಡಿ ಎಂದು ಕೋರ್ಟ್‌ ಹೇಳಿದ್ದರಿಂದ ಅದನ್ನೂ ಪಾಲಿಸಲಾಯಿತು. ಆದರೆ, ಉಮೇದುವಾರಿಕೆ ಸಲ್ಲಿಸಲು ಸಮಯಾವಕಾಶ ನೀಡಿದ ಸಂಗತಿ ಎಲ್ಲರಿಗೂ ಗೊತ್ತಿರಲಿಲ್ಲ. ಹಾಗಾಗಿ, ನಾವು ಅವಕಾಶ ವಂಚಿತರಾಗಿದ್ದೇವೆ ಎಂದು ಮತ್ತೆ ಕೆಲವರು ಎರಡನೇ ಬಾರಿ ಹೈಕೋರ್ಟ್‌ ಮೊರೆ ಹೋದರು. ಈಗ ಕೋರ್ಟ್‌ ಹೊಸದಾಗಿ ನೋಟಿಫಿಕೇಶನ್‌ ಹೊರಡಿಸಿ, ಚುನಾವಣೆ ನಡೆಸಬೇಕು ಎಂದು ಎರಡನೇ ಬಾರಿಯ ಆದೇಶದಲ್ಲಿ ತಿಳಿಸಿದೆ’ ಎಂದು ವಿವರಿಸಿದರು.

ADVERTISEMENT

‘ಸಂಸ್ಥೆಯ ಸದಸ್ಯರಾಗಿ ಎರಡು ವರ್ಷಗಳ ನಂತರ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗುತ್ತಾರೆ ಎಂದು ಎಚ್‌ಕೆಸಿಸಿಐ ಬೈಲಾದಲ್ಲಿ ಹೇಳಿದೆ. ಹಾಗಾಗಿ, ಅರ್ಹರಲ್ಲದವರ ನಾಮಪತ್ರಗಳನ್ನು ನಾವು ಪಡೆದಿರಲಿಲ್ಲ. ಇದನ್ನೇ ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸ್ವತಃ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೆಲ್ಲ ಸೇರಿಕೊಂಡು ಚುನಾವಣೆ ನಡೆಸಿಕೊಡುವಂತೆ ಮನವಿ ಮಾಡಿದ್ದರಿಂದ ಹಾಗೂ ಸಂಸ್ಥೆಯ ಮೇಲಿನ ಗೌರವದ ಕಾರಣ ನಾನು ಈ ಕೆಲಸ ಒಪ್ಪಿಕೊಂಡಿದ್ದೇನೆ. ಯಾರಿಂದಲೂ ನನಗೆ ಏನೂ ಆಗಬೇಕಿಲ್ಲ. ನ್ಯಾಯಸಮ್ಮತ ಚುನಾವಣೆ ಮಾತ್ರ ನನ್ನ ಉದ್ದೇಶ’ ಎಂದೂ ಅವರು ತಿಳಿಸಿದರು.

‘ಇತ್ತೀಚೆಗೆ ನನ್ನ ಆರೋಗ್ಯ ಸರಿಯಾಗಿ ಇಲ್ಲದ ಕಾರಣ ನಾನು ಈ ಕೆಲಸದಿಂದ ಹಿಂದೆ ಸರಿಯುವುದಾಗಿ ಆಡಳಿತ ಮಂಡಳಿಗೆ ತಿಳಿಸಿದೆ. ಆದರೆ, ಪಟ್ಟುಹಿಡಿದು ಚುನಾವಣಾ ಪ್ರಕ್ರಿಯೆ ಮುಗಿಸಿಕೊಡುವಂತೆ ಕೋರಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಕೆಲವರು ಮಾತ್ರ ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂದು ಬಯಸುತ್ತಿದ್ದಾರೆ. ನಾನು ನ್ಯಾಯಾಲಯ ಆದೇಶ ಪಾಲಿಸುತ್ತೇನೆ ಹೊರತು; ಯಾರೋ ಹೇಳಿದಂತೆ ಮಾಡಲು ಬರುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಚುನಾವಣಾಧಿಕಾರಿ ಅನುಭವ ಪರಿಗಣಿಸಿದ್ದೇವೆ’

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಎಚ್‌ಕೆಸಿಸಿಐ ಕಾರ್ಯದರ್ಶಿಶಶಿಕಾಂತ ಪಾಟೀಲ, ‘ಮೊದಲು ಎಚ್‌ಕೆಸಿಸಿಐ ಚುನಾವಣಾಧಿಕಾರಿ ಆಗಿದ್ದ ನರೇಂದ್ರ ಬಡಶೇಷಿ ಅವರು ತಮಗೆ 60ಕ್ಕೂ ಹೆಚ್ಚು ವಯಸ್ಸಾಗಿದ್ದು, ಆರೋಗ್ಯದ ಕಾಳಜಿ ವಹಿಸಬೇಕಾಗಿದೆ. ಮನೆಯವರು ಕೂಡ ವಿಶ್ರಾಂತಿ ಪಡೆಯುವಂತೆ ಹೇಳಿದ್ದರಿಂದ ಚುನಾವಣೆ ಅಧಿಕಾರಿ ಆಗಿ ಕೆಲಸ ಮಾಡಲಾಗುವುದಿಲ್ಲ ಎಂದು ಹೇಳಿ ಹಿಂದೆ ಸರಿದರು. ಹಾಗಾಗಿ, ಅನುಭವವುಳ್ಳ ಬಸವರಾಜ ಇಂಗಿನ್‌ ಅವರನ್ನು ಪರಿಗಣಿಸಲಾಯಿತು’ ಎಂದು ತಿಳಿಸಿದರು.

ಕೋವಿಡ್‌ ನಿಯಮಾವಳಿಗಳು ಈಗಲೂ ಚಾಲ್ತಿಯಲ್ಲಿವೆ. 60 ವರ್ಷ ಮೇಲ್ಪಟ್ಟವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಬಾರದು ಎಂಬುದೂ ನಿಯಮ. ಆದರೆ, ಚುನಾವಣಾಧಿಕಾರಿ ಆಗಿ 80 ವರ್ಷ ಸಮೀಪಿಸಿದವರನ್ನು ನೇಮಕ ಮಾಡಿದ್ದು ಏಕೆ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಸವರಾಜ ಇಂಗಿನ್‌ ಅವರು ವಿವಿಧ ಚುನಾವಣೆಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಅವರ ಜ್ಞಾನ ಬಳಸಿಕೊಳ್ಳುವ ಉದ್ದೇಶದಿಂದ ನೇಮಕ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.