ADVERTISEMENT

ಕಲಬುರ್ಗಿ ನಗರದಲ್ಲಿ ಭಾರಿ ಮಳೆ: ದುಃಸ್ವಪ್ನದ ರಾತ್ರಿ ಕಳೆದ ನಿವಾಸಿಗಳು

ಮಳೆಗೆ ತತ್ತರಿಸಿದ ಬಡಾವಣೆಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 8:15 IST
Last Updated 14 ಅಕ್ಟೋಬರ್ 2020, 8:15 IST
ಕಲಬುರ್ಗಿಯ ಕುಸನೂರ ರಸ್ತೆಯ ರಾಜಾಜಿನಗರದಲ್ಲಿ ಭಾರಿ ಮಳೆಯಿಂದಾಗಿ ಜಲಾವೃತವಾಗಿರುವುದು
ಕಲಬುರ್ಗಿಯ ಕುಸನೂರ ರಸ್ತೆಯ ರಾಜಾಜಿನಗರದಲ್ಲಿ ಭಾರಿ ಮಳೆಯಿಂದಾಗಿ ಜಲಾವೃತವಾಗಿರುವುದು   

ಕಲಬುರ್ಗಿ: ಇಲ್ಲಿನ ಕುಸನೂರು ರಸ್ತೆಯ ರಾಜಾಜಿ ನಗರದ ನಿವಾಸಿಗಳಾದ ಗುರುರಾಜ ಕುಲಕರ್ಣಿ, ಮೀನಾಕ್ಷಿ, ಚಂದ್ರಕಾಂತ ಅವರ ಕುಟುಂಬಗಳಿಗೆ ಮಂಗಳವಾರದ ರಾತ್ರಿ ಎಂದಿನಂತಿರಲಿಲ್ಲ. ಸಂಜೆಯವರೆಗೂ ಮಳೆಯ ಸುದ್ದಿಯೇ ಇರದಿದ್ದರಿಂದ ನಿರಾಳರಾಗಿ ನಿದ್ದೆಗೆ ಜಾರಿದವರಿಗೆ ಕೆಲವೇ ನಿಮಿಷಗಳಲ್ಲಿ ಪ್ರವಾಹದ ನೀರಿನ ಸದ್ದು ಕೇಳಿಸಿತು.

ಎದ್ದು ನೋಡುವಷ್ಟರಲ್ಲಿ ಕುಲಕರ್ಣಿ ಅವರ ಕೆಳಗಿನ ಮನೆಯಲ್ಲಿ ಕ್ರಮೇಣ ನೀರು ತುಂಬಿಕೊಳ್ಳಲಾರಂಭಿಸಿತು. ಎದುಗಿನ ರಸ್ತೆಯಲ್ಲೇ ಹೊಳೆ ಹರಿದು ಬಂತೇನೋ ಎಂಬಷ್ಟು ಮಳೆಯ ರಭಸ ಅವರನ್ನು ಎಬ್ಬಿಸಿತು. ಗಂಗಾಧರ ಕುಲಕರ್ಣಿ ಅವರು ಪತ್ನಿ, ಇಬ್ಬರು ಮಕ್ಕಳನ್ನು ಎಬ್ಬಿಸಿ ತಾವೂ ದಡಬಡನೇ ಸಿಕ್ಕ ಸಾಮಾನು, ಸರಂಜಾಮುಗಳನ್ನೆಲ್ಲ ಮೊದಲ ಮಹಡಿಗೆ ಸಾಗಿಸಿದರು. ಇಷ್ಟಾಗುವಾಗ ಕೆಳಭಾಗದ ಮನೆಯ ತುಂಬ ನೀರು ತುಂಬಿಕೊಂಡು ಹರಿಯುತ್ತಿತ್ತು. ಮೊದಲ ಮಹಡಿಮೆ ಮೇಲೆ ಬಂದಾಗಲೂ ನಿದ್ದೆಯೇನೂ ಹತ್ತಲಿಲ್ಲ. ಯಾವಾಗ ನೀರಿನ ಪ್ರಮಾಣ ಜಾಸ್ತಿಯಾಗುತ್ತದೋ ಎಂಬ ಚಿಂತೆಯಲ್ಲಿಯೇ ಇಡೀ ರಾತ್ರಿಯನ್ನು ಕಳೆದಾಯಿತು. ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂದರೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಲಿಲ್ಲ.

ಚಂದ್ರಕಾಂತ ಅವರದ್ದು ಇನ್ನೊಂದು ಬಗೆಯ ಸಮಸ್ಯೆ. ಅವರ ಮನೆಯೊಳಗೆ ಮಳೆ ನೀರು ಬರಲಿಲ್ಲ. ಆದರೆ, ಮನೆ ಎದುರು ನಿಲ್ಲಿಸಿದ್ದ ಮಾರುತಿ–800 ಕಾರು ನೀರಿನ ರಭಸಕ್ಕೆ 30 ಮೀಟರ್‌ ಮುಂದೆ ಹರಿದುಕೊಂಡು ಹೋಗಿ, ಪಕ್ಕದಲ್ಲಿ ಮಗುಚಿ ಬಿದ್ದಿದೆ. ಅದರ ಹಿಂದೆಯೇ ಇನ್ನೊಬ್ಬರಿಗೆ ಸೇರಿದ ಪಲ್ಸರ್‌ ಬೈಕ್‌ ಅನಾಥವಾಗಿ ಬಿದ್ದಿದೆ. ಬುಧವಾರ ಬೆಳಿಗ್ಗೆ ಕಾರು ನೋಡಿದ ಚಂದ್ರಕಾಂತ ಹಾಗೂ ಅವರ ಪತ್ನಿಗೆ ಗಾಬರಿಯಾಗಿದೆ. ಮಧ್ಯಾಹ್ನದವರೆಗೂ ಕಾರನ್ನು ಮೇಲೆತ್ತುವ ಯತ್ನಗಳು ಫಲ ನೀಡಲಿಲ್ಲ.

ADVERTISEMENT

ಇಬ್ಬರು ಮಕ್ಕಳೊಂದಿಗೆ ಕಿರಾಯಿ (ಬಾಡಿಗೆ) ಮನೆಯಲ್ಲಿ ವಾಸವಾಗಿರುವ ಬಿಹಾರ ಮೂಲದ ಮೀನಾಕ್ಷಿ ಅವರದು ಮನೆಗೆಲಸ ಮಾಡಿಕೊಂಡೇ ಬದುಕಿನ ಬಂಡಿ ಕಟ್ಟಿಕೊಳ್ಳುವ ಅನಿವಾರ್ಯತೆ. ಮಧ್ಯರಾತ್ರಿ ಎದ್ದು ನೋಡಿದಾಗ ನೀರೆಲ್ಲ ಮನೆಯನ್ನು ಆವರಿಸಿಕೊಂಡಿದೆ. ಮನೆಯಲ್ಲಿನ ಸಾಮಾನು ಸರಂಜಾಮುಗಳನ್ನು ಅಲ್ಲಿಯೇ ಬಿಟ್ಟು ಓಣಿಯ ಮಧ್ಯದ ರಸ್ತೆಗೆ ಮಕ್ಕಳನ್ನು ಕರೆದುಕೊಂಡು ಬಂದವರು ಗಂಟೆಗಟ್ಟಲೇ ರಸ್ತೆಯಲ್ಲೇ ಕಳೆದರು.

ಇಎಸ್‌ಐಸಿ ಆಸ್ಪತ್ರೆ, ಗುಲಬರ್ಗಾ ವಿಶ್ವವಿದ್ಯಾಲಯದ ಕಡೆಯಿಂದ ರಭಸದಿಂದ ಹರಿದುಕೊಂಡು ಬರುವ ನೀರು ಮುಂದೆ ರಿಂಗ್ ರಸ್ತೆಯ ಮೂಲಕ ಕೋಟನೂರ (ಡಿ) ಗ್ರಾಮದ ಕಡೆ ಹರಿಯುತ್ತದೆ. ಪೂಜಾ ಕಾಲೊನಿ, ಗಂಗಾ ಲೇಔಟ್, ರಾಜಾಜಿನಗರದ ಜನತೆ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ದುಃಸ್ವಪ್ನದ ದಿನಗಳನ್ನು ರಾತ್ರಿಗಳನ್ನು ಕಳೆಯುತ್ತಾರೆ. ಆದರೆ, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಸುರಿದ ಮಳೆ ಮಾತ್ರ ಹಿಂದೆಂದೂ ಕಂಡು ಕೇಳರಿಯದಷ್ಟು ಭಯಾನಕವಾಗಿತ್ತು ಎನ್ನುತ್ತಾರೆ ಗುರುರಾಜ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.