ADVERTISEMENT

ಕಲಬುರಗಿ | ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯ: ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:12 IST
Last Updated 17 ಸೆಪ್ಟೆಂಬರ್ 2025, 6:12 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಕಲಬುರಗಿ: ‘ಕಳೆದ ಒಂದೂವರೆ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಹೆಸರು, ಉದ್ದು, ಹತ್ತಿ, ತೊಗರಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಆರ್ಥಿಕ ನೆರವು ಒದಗಿಸಬೇಕು’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

‘ಮಳೆಯಿಂದ ಹಾನಿಯಾದ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಾವನೂರ, ಸೊನ್ನ, ಔರಾದ್‌ ಗ್ರಾಮಗಳು, ಅಫಜಲಪುರ ತಾಲ್ಲೂಕಿನ ಹೊನ್ನಕಿರಣಗಿ, ಸೋಮನಾಥಹಳ್ಳಿ ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ಸೋಮವಾರ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದೆ’ ಎಂದು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ವೇಳೆ ಹೊನ್ನಕಿರಣಗಿಯಲ್ಲಿ 9 ಸಾವಿರ ಎಕರೆಯಲ್ಲಿ ತೊಗರಿ ಬಿತ್ತಿದ್ದು, ಪ್ರತಿವರ್ಷ 50 ಸಾವಿರ ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಈ ಸಲ ಎರಡು ಸಾವಿರ ಕ್ವಿಂಟಲ್‌ ಇಳುವರಿ ಬರೋದು ಕಷ್ಟ ಎಂದು ರೈತರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಎಕರೆಗೆ ರಾಜ್ಯ ಸರ್ಕಾರ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ಹಿಂಗಾರು ಹಂಗಾಮಿಗೆ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬೆಳೆ ಹಾನಿ ಸಮೀಕ್ಷೆಯಲ್ಲಿ ನಡೆಯುತ್ತಿರುವ ಅನೇಕ ಲೋಪಗಳ ಬಗೆಗೆ ರೈತರು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರ ಬೆಳೆ ಹಾನಿ ಸಮೀಕ್ಷೆಯನ್ನು ವೈಜ್ಞಾನಿಕ ಮಾದರಿಯಲ್ಲಿ ನಿಖರವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

‘ಜೆಡಿಎಸ್ ಪ್ರಮುಖವಾಗಿ ರೈತರಿಂದಲೇ ಬೆಳೆದಿರುವ ಪಕ್ಷ. ರೈತರ ವಿಚಾರದಲ್ಲಿ ನಾವೆಂದೂ ರಾಜಕಾರಣ ಮಾಡಲ್ಲ. ರಾಜ್ಯದ ರೈತರಿಗೆ ಕೇಂದ್ರದಿಂದಲೂ ಸಿಗಬೇಕಾದ ಪರಿಹಾರ ಬಗೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮೂಲಕ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲರಾಜ್‌ ಗುತ್ತೇದಾರ, ಮುಖಂಡರಾದ ಬಸವರಾಜ ತಡಕಲ್‌, ಶಿವಕುಮಾರ ನಾಟಿಕಾರ, ಕೃಷ್ಣಾ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಕೇವಲ ಘೋಷಣೆಗೆ ಸೀಮಿತವಾದ ಸರ್ಕಾರ’

‘ರಾಜ್ಯ ಸರ್ಕಾರ ಕೇವಲ ಯೋಜನೆಗಳ ಘೋಷಣೆಗೆ ಸೀಮಿತವಾಗಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನತ್ತ ತೆಗೆದುಕೊಂಡು ಹೋಗುವಲ್ಲಿ ‌ವಿಫಲವಾಗಿದೆ’ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ‘ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಖಜಾನೆಯಲ್ಲಿ ದುಡ್ಡಿದಿಯೊ ಇಲ್ಲವೊ ದುಡ್ಡಿದ್ದರೆ ಅದನ್ನು ಎಲ್ಲಿ ವೆಚ್ಚ ಮಾಡಲಾಗುತ್ತಿದೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು’ ಎಂದು ನಗರದಲ್ಲಿ ಮಂಗಳವಾರ ‌ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಲ್ಯಾಣದ ಅಭಿವೃದ್ಧಿಗೆ ₹5 ಸಾವಿರ‌ ಕೋಟಿ ಕೊಟ್ಟಿರುವುದಾಗಿ ಸರ್ಕಾರ ಹೇಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಬೆಟ್ಟದ ಬಳಿ ಕಾರ್ಯಕ್ರಮ ‌ಮಾಡಿ ಮೂರ್ನಾಲ್ಕು ಸಾವಿರ ಕೋಟಿ ಮೊತ್ತದ‌ ಯೋಜನೆ ಘೋಷಿಸುತ್ತಾರೆ. ಮಲೆಮಹಾದೇಶ್ವರ ಬೆಟ್ಟದಲ್ಲಿ ಸಚಿವ ‌ಸಂಪುಟ ಸಭೆ ನಡೆಸಿ ಕೆಲವು ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ವಿಜಯಪುರದಲ್ಲಿ ಒಂದಿಷ್ಟು ‌ಸಾವಿರ ಕೋಟಿ ‌ಯೋಜನೆ ಘೋಷಿಸುತ್ತಾರೆ. ಆದರೆ ಕಲಕಲಬುರಗಿ ‌ನಗರದ ರಸ್ತೆಗಳಲ್ಲೆ ಸಾಕಷ್ಟು ಗುಂಡಿಗಳು ಬಿದ್ದಿವೆ. ಹೊಸ ರಸ್ತೆ ನಿರ್ಮಿಸುವುದು ಬಿಡಿ ಕನಿಷ್ಠ ಆ ಗುಂಡಿ ಮುಚ್ಚುವ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಕೆಕೆಆರ್‌ಡಿಬಿಯನ್ನು ಪರ್ಸಂಟೇಜ್ ರಾಜಕಾರಣಕ್ಕೆ ಇಟ್ಟುಕೊಂಡಿದೆ. ಕೆಕೆಆರ್‌ಡಿಬಿ ಇರೋದೇ ದುಡ್ಡು ಮಾಡೋದಕ್ಕೆ ಕಮಿಷನ್ ‌ಹೊಡೆಯೋದಕ್ಕೆ ಎಂಬಂತಾಗಿದೆ. ಕೆಕೆಆರ್‌ಡಿಬಿ ಕೆಲಸಗಳನ್ನು 30 ಪರ್ಸೆಂಟ್‌ಗೆ ಲ್ಯಾಂಡ್‌ ‌ಆರ್ಮಿಗೆ (ಕೆಆರ್‌ಐಡಿಎಲ್‌) ಮಾರ್ಕೊಂಡಾಗಿ ಹೋಗಿದೆ. ಸರ್ಕಾರ ಅಭಿವೃದ್ಧಿ ‌ವಿಷಯ ಬಂದಾಗ ಮಾತ್ರವೇ ಕೆಕೆಆರ್‌ಡಿಬಿ ಹೆಸರನ್ನು ಮುನ್ನಲೆಗೆ ತರುತ್ತದೆ ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.