ADVERTISEMENT

4ರಂದು ಕಲಬುರಗಿಗೆ ನಿಖಿಲ್ ಕುಮಾರಸ್ವಾಮಿ: ಬಾಲರಾಜ್ ಗುತ್ತೇದಾರ

ಕಲಬುರಗಿ, ಜೇವರ್ಗಿಯಲ್ಲಿ ಪಕ್ಷದ ಬೃಹತ್ ಸಮಾವೇಶ, ಸದಸ್ಯತ್ವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:29 IST
Last Updated 1 ಜುಲೈ 2025, 13:29 IST
ಬಾಲರಾಜ್ ಗುತ್ತೇದಾರ
ಬಾಲರಾಜ್ ಗುತ್ತೇದಾರ   

ಕಲಬುರಗಿ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ 4ರಂದು ಕಲಬುರಗಿ ನಗರದಲ್ಲಿ ಹಾಗೂ ಜೇವರ್ಗಿಯಲ್ಲಿ ಪಕ್ಷದ ಬೃಹತ್ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ 58 ದಿನ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಎರಡೂವರೆ ಲಕ್ಷ ಸದಸ್ಯತ್ವ ಗುರಿ ಇದೆ’ ಎಂದರು.

‘ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಏರ್‌ರ್ಪೋರ್ಟ್‌ ರಸ್ತೆಯಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಬೈಕ್‌ ರ್‍ಯಾಲಿ ನಡೆಸಿ, ನಂತರ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ಪಕ್ಷದ ಮಾಜಿ ಸಚಿವರು, ಶಾಸಕರು, ಮುಖಂಡರು ಭಾಗವಹಿಸುವರು’ ಎಂದರು.

ADVERTISEMENT

ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಅದೇ ದಿನ ಮಧ್ಯಾಹ್ನ 12 ಗಂಟೆಗೆ ಜೇವರ್ಗಿ ಪಟ್ಟಣದ ಬೂತ್‌ಪೂರ ಕಲ್ಯಾಣಮಂಟಪದಲ್ಲಿ ಜೆಡಿಎಸ್ ಪಕ್ಷದ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನಕ್ಕೆ ನಿಖಿಲ್‌ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ’ ಎಂದರು.

‘ಸಂಜೆ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ಹಾಗೂ ಖಾಜಾ ಬಂದೇನವಾಜ್‌ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ನಂತರ ಈಚೆಗೆ ನಿಧನರಾದ ಮಾಜಿ ಮೇಯರ್‌ ಜಿ.ಎಸ್.ರಹೆಮತ್, ಉಪಸಭಾಪತಿ ಡೇವಿಡ್ ಸಿಮಿಯೋನ್‌ ಅವರ ನಿವಾಸಗಳಿಗೆ ಭೇಟಿ ನೀಡುವರು’ ಎಂದು ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ, ಕೃಷ್ಣ ರೆಡ್ಡಿ, ಬಸವರಾಜ ಬಿರಬಿಟ್ಟೆ, ಶಾಮರಾವ ಸುರನ್‌, ರಾಮಚಂದ್ರ ಅಟ್ಟೂರ್‌, ಮಲ್ಲಿಕಾರ್ಜುನ ಸಂಗಾಣಿ, ಮಹಾಂತಪ್ಪ ಮದ್ರಿ ಇತರರಿದ್ದರು.

ದೊಡ್ಡಪ್ಪಗೌಡ ಪಾಟೀಲ

‘ಕೆಕೆಆರ್‌ಡಿಬಿ ಹಣ ದುರ್ಬಳಕೆ’

‘ಜೇವರ್ಗಿ ಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಹಣ ದುರ್ಬಳಕೆ ಆಗುತ್ತಿದೆ. ಬೋಗಸ್‌ ಬಿಲ್‌ ಎತ್ತಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿಯೂ ₹30 ಸಾವಿರ ಕೊಟ್ಟರೆ ಮಾತ್ರ ವಸತಿ ಯೋಜನೆ ಮನೆ ಎಂಬಂತಾಗಿದೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಅವರು ನಮ್ಮ ಕ್ಷೇತ್ರಕ್ಕೂ ಬಂದು ಪರಿಶೀಲನೆ ನಡೆಸಲಿ’ ಎಂದು ದೊಡ್ಡಪ್ಪಗೌಡ ಪಾಟೀಲ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.