ADVERTISEMENT

ಕಲಬುರ್ಗಿ: ಭೀಮಳ್ಳಿಗೆ ಬೇಕಿದೆ ಮೂಲಸೌಕರ್ಯ

ಗ್ರಾಮಸ್ಥರಿಗೆ ಸಿಗದ ಶುದ್ಧ ನೀರು; ಇದ್ದೂ ಇಲ್ಲದಂತಿರುವ ಸಾರ್ವಜನಿಕ ಶೌಚಾಲಯ

ಹನಮಂತ ಕೊಪ್ಪದ
Published 28 ಫೆಬ್ರುವರಿ 2021, 1:51 IST
Last Updated 28 ಫೆಬ್ರುವರಿ 2021, 1:51 IST
ಕಲಬುರ್ಗಿ ತಾಲ್ಲೂಕಿನ ಭೀಮನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯ ಪಾಳು ಬಿದ್ದಿರುವುದು
ಕಲಬುರ್ಗಿ ತಾಲ್ಲೂಕಿನ ಭೀಮನಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯ ಪಾಳು ಬಿದ್ದಿರುವುದು   

ಭೀಮಳ್ಳಿ (ಕಲಬುರ್ಗಿ ತಾ.):ಭೀಮಳ್ಳಿ ಗ್ರಾಮ ಶುದ್ಧ ಕುಡಿಯುವ ನೀರು, ಶೌಚಾಲಯ, ಸಿಸಿ ರಸ್ತೆ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.

ಕಲಬುರ್ಗಿ ನಗರದಿಂದ 20 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 350 ಮನೆಗಳಿದ್ದು, 3 ಸಾವಿರ ಜನಸಂಖ್ಯೆ ಇದೆ. 10 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಕಾರ್ಮಿಕರು ಮತ್ತು ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ಇದೆ. ಇಲ್ಲಿನ ಮಕ್ಕಳು ಪ್ರೌಢಶಾಲೆ ಶಿಕ್ಷಣಕ್ಕಾಗಿ 1 ಕಿ.ಮೀ ಅಂತರದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಹೋಗಬೇಕಾಗಿದೆ.

ADVERTISEMENT

ಆಳಂದ ರಸ್ತೆಯಿಂದ ಈ ಗ್ರಾಮವನ್ನು ಸಂಪರ್ಕಿಸುವ 4 ಕಿ.ಮೀ ಅಂತರದ ಡಾಂಬರ್ ರಸ್ತೆ ಗುಣಮಟ್ಟದಿಂದ ಕೂಡಿದೆ. ಆದರೆ ಗ್ರಾಮದ ಒಳಪ್ರವೇಶಿಸುತ್ತಿದ್ದಂತೆಯೇ ಹದಗೆಟ್ಟ ಮಣ್ಣಿನ ರಸ್ತೆಗಳು ಎದುರಾಗುತ್ತದೆ. ಇಡೀ ಗ್ರಾಮ ಸುತ್ತಾಡಿದರೂ ಒಂದೇ ಒಂದು ಸುಸಜ್ಜಿತ ಸಿಸಿ ರಸ್ತೆಯೂ ಕಂಡು ಬರುವುದಿಲ್ಲ. ಇದು ಗ್ರಾಮದ ಅಭಿವೃದ್ಧಿಯ ಚಿತ್ರಣವನ್ನು ಹೇಳುತ್ತದೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಭೀಮಳ್ಳಿ ಇಂದಿಗೂ ಬಹಿರ್ದೆಸೆ ನಿಂತಿಲ್ಲ. ಮಹಿಳೆಯರು ಶೌಚಕ್ಕಾಗಿ ಸಂಜೆಯಾಗುವವರೆಗೂ ಕಾಯುವಂಥ ಪರಿಸ್ಥಿತಿಯಿದೆ. ಗ್ರಾಮ ಪಂಚಾಯಿತಿ ವತಿಯಿಂದ ಸಾಮೂಹಿಕ ಶೌಚಾಲಯ ಕಟ್ಟಲಾಗಿದೆ. ಆದರೆ ನಿರ್ವಹಣೆ ಕೊರತೆ, ನೀರಿನ ಸಂಪರ್ಕ ಇರದ ಕಾರಣಶೌಚಾಲಯ ಸುತ್ತಮುತ್ತ ಮುಳ್ಳು ಕಂಟಿಗಳು ಬೆಳೆದು ಪಾಳು ಬಿದ್ದಿದೆ.

ಬಹುತೇಕ ಮನೆಗಳಲ್ಲಿ ಶೌಚಾಲಯ ಇದ್ದರೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಅವು ಬಳಕೆಯಾಗುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಇಂದಿಗೂ ಬಹಿರ್ದೆಸೆ ಮುಂದುವರೆದಿದೆ ಎನ್ನುತ್ತಾರೆ ಗ್ರಾಮಸ್ಥರು.

ಮನೆಗಳ ಮುಂದೆ ಹಾದುಹೋಗುವ ಚರಂಡಿಗಳಲ್ಲಿ ನೀರು ಕಟ್ಟಿಕೊಂಡು ದುರ್ವಾಸನೆ ಹರಡುತ್ತಿದೆ. ಚರಂಡಿ ಕಾಲುವೆಗಳ ಮೇಲೆ ಸ್ಲ್ಯಾಬ್ ಹಾಕದೆ ಇರುವುದರಿಂದ ಅವುಗಳ ಸುತ್ತಮುತ್ತ ತಿರುಗಾಡುವುದು ಕಷ್ಟಕರವಾಗಿದೆ. ಅಲ್ಲದೆ ಕೆಲವು ಕಡೆ ಚರಂಡಿಗಳಲ್ಲಿ ಹೂಳು ತುಂಬಿ ಅದರಲ್ಲಿರುವ ಕೊಳಚೆ ನೀರು ಮನೆಗಳ ಬಂದು ನಿಂತಿದ್ದು, ಗ್ರಾಮಸ್ಥರ ಗೋಳು ಹೇಳತೀರದಾಗಿದೆ.

ಇಲ್ಲಿನ ಕೊಳವೆಬಾವಿಗಳಿಂದ ಪೂರೈಸುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮ ಪಂಚಾಯಿತಿ ವತಿಯಿಂದ 4 ಟ್ಯಾಂಕ್ ಕಟ್ಟಿಸಲಾಗಿದೆ. ಆದರೆ ನೀರಿನ ಸಂಪರ್ಕ ಕಲ್ಪಿಸದ ಕಾರಣ ಇದ್ದೂ ಇಲ್ಲದಂತಾಗಿವೆ. ಅಧಿಕಾರಿಗಳು ಗ್ರಾಮಕ್ಕೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.

‘ಜನರಲ್ಲಿ ಶೌಚಾಲಯ ಬಳಕೆ ಅರಿವು ಮೂಡಿಸಿ ಗ್ರಾಮವನ್ನು ಬಹಿರ್ದೆಸೆ ಮುಕ್ತ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ ಶೇ 80ರಷ್ಟು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಮತ್ತೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುವಂತೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅಭಿವೃದ್ಧಿ ಅಧಿಕಾರಿ ಸಯ್ಯದ್ ಪಟೇಲ್ ತಿಳಿಸಿದರು.

***

3– 4 ದಿನಗಳಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಮೋಟಾರ್ ಅಳವಡಿಸಿ ನೀರಿನ ಸಂಪರ್ಕ ಕಲ್ಪಿಸುತ್ತೇವೆ. ಅದರ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡುತ್ತೇವೆ.
– ಸಯ್ಯದ್ ಪಟೇಲ್, ಪಿಡಿಒ, ಭೀಮಳ್ಳಿ

***

ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇವೆ. ಗ್ರಾಮಸ್ಥರ ಸಮಸ್ಯೆಗಳನ್ನು ಚರ್ಚಿಸಿ, ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ.
– ಗೀತಾ ರಾಮಚಂದ್ರ, ಗ್ರಾ.ಪಂ ಅಧ್ಯಕ್ಷೆ, ಭೀಮಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.