ADVERTISEMENT

ಗಂಗನಪಳ್ಳಿ: ಮೂಲಸೌಕರ್ಯಗಳೇ ಗಗನಕುಸುಮ

ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ದತ್ತು ಗ್ರಾಮ; ರಸ್ತೆ, ಚರಂಡಿ ಸಮಸ್ಯೆ

ಜಗನ್ನಾಥ ಡಿ.ಶೇರಿಕಾರ
Published 9 ಜೂನ್ 2021, 2:22 IST
Last Updated 9 ಜೂನ್ 2021, 2:22 IST
ಚಿಂಚೋಳಿ ತಾಲ್ಲೂಕು ಗಂಗನಪಳ್ಳಿ ಗ್ರಾಮದಲ್ಲಿ ಮುಖ್ಯರಸ್ತೆ ಹಾಳಾಗಿದ್ದು ಚರಂಡಿ ಇಲ್ಲದ ಕಾರಣ ಕೆಸರು ಕೊಚ್ಚೆಯಲ್ಲಿಯೇ ನಡೆಯುವಂತಾಗಿದೆ
ಚಿಂಚೋಳಿ ತಾಲ್ಲೂಕು ಗಂಗನಪಳ್ಳಿ ಗ್ರಾಮದಲ್ಲಿ ಮುಖ್ಯರಸ್ತೆ ಹಾಳಾಗಿದ್ದು ಚರಂಡಿ ಇಲ್ಲದ ಕಾರಣ ಕೆಸರು ಕೊಚ್ಚೆಯಲ್ಲಿಯೇ ನಡೆಯುವಂತಾಗಿದೆ   

ಚಿಂಚೋಳಿ: ತಾಲ್ಲೂಕಿನ ಗಂಗನಪಳ್ಳಿ ಗ್ರಾಮದಲ್ಲಿ ಮೂಲಸೌಲಭ್ಯಗಳು ಗಗನ ಕುಸುಮವಾಗಿವೆ. ತಾಲ್ಲೂಕಿನ ಅಣವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಂಗನಪಳ್ಳಿ ಗ್ರಾಮದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಚರಂಡಿ ಸಿಗುವುದಿಲ್ಲ. ಇದರಿಂದ ಮಳೆ ನೀರು ರಸ್ತೆಯ ಮೇಲೆ ನಿಂತು ರಸ್ತೆಗಳು ಹಾಳಾಗುತ್ತಿವೆ. ಜನರು ಕೆಸರು ಕೊಚ್ಚೆಯಲ್ಲಿಯೇ ಓಡಾಡುವಂತಾಗಿದೆ.

ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ದತ್ತು ಗ್ರಾಮವಾಗಿರುವ ಗಂಗನಪಳ್ಳಿ ಗ್ರಾಮದ ಮುಖ್ಯರಸ್ತೆಯೇ ಹದಗೆಟ್ಟು ಹೋಗಿದೆ. ಗುಂಡಿಗಳಲ್ಲಿ ಮನೆಯ ಬಚ್ಚಲಿನ ನೀರು ನಿಂತು ಕೆಸರು ಕೊಚ್ಚೆಯಾಗಿದೆ. ಕಳೆದ ವರ್ಷ ಸಿಸಿ ರಸ್ತೆ ಮಂಜೂರಿಗೆ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈವರೆಗೂ ಮಂಜೂರಾಗಿಲ್ಲ ಸ್ಥಳೀಯ ಮುಖಂಡರಾದ ಜಗನ್ನಾಥ ಮರಪಳ್ಳಿ ಆರೋಪಿಸಿದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು ಕಟ್ಟಡವೂ ಅವ್ಯವಸ್ಥೆಯಿಂದ ಕೂಡಿದೆ. ಅಂಗನವಾಡಿ ಕೇಂದ್ರ ಹೊಸ ಬಡಾವಣೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದೆ. ಗ್ರಾಮದ ಹೊಸ ಬಡಾವಣೆ ನಿರ್ಮಾಣವಾಗಿ 5 ವರ್ಷಗಳಾದರೂ ಈ ಬಡಾವಣೆಯ ಜನರು ಕುಡಿವ ನೀರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರಯುಕ್ತ ಇಡಿ ಗ್ರಾಮ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕೆಂದು ಜನರು ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮದ ತುಂಬಾ ಕೆಸರು ರಚ್ಚೆ ಕಣ್ಣಿಗೆ ಕಾಣಸಿಗುತ್ತದೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಕುಂಚಾವರಂ ಕ್ರಾಸ್‌ನಿಂದ ಗ್ರಾಮದವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಚೆಟ್ಟಿನಾಡ್ ಕಂಪೆನಯ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಶೇಖರಬಾಬು ಅವರಿಗೆ ಮೂಲಸೌಕರ್ಯ ಕಲ್ಪಿಸಲು ಕೋರಿ ಎರಡು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಂಪನಿ ಸ್ಥಾಪಿಸುವಾಗ ಬಣ್ಣದ ಭರವಸೆ ನೀಡಿದ ಕಂಪೆನಿಯ ಅಧಿಕಾರಿಗಳು, ಸ್ಥಾಪಿಸಿ ದಶಕ ಕಳೆದರೂ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಜಯಪ್ರಕಾಶ ತಳವಾರ ದೂರಿದ್ದಾರೆ.

ಗಂಗನಪಳ್ಳಿ ಗ್ರಾಮದ ಹಳೆಊರು ಮತ್ತು ಹೊಸ ಊರಿನ ಮಧ್ಯೆ ರಸ್ತೆ ಮಂಜೂರಿಗೆ ಈವರೆಗೆ ಯಾವುದೇ ಯೋಜನೆಯಲ್ಲಿ ಮಂಜೂರಾಗಿಲ್ಲ ಪ್ರಸಕ್ತ ವರ್ಷ ಯಾವುದಾದರೂ ಯೋಜನೆಯಲ್ಲಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಗುರುರಾಜ ಜೋಷಿ ತಿಳಿಸಿದರು.

ಹೊಸ ಬಡಾವಣೆಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ಸೌಭಾಗ್ಯ ಯೋಜನೆ ಸ್ಥಗಿತವಾಗಿದೆ. ಹೊಸ
ಬಡಾವಣೆಯ ನಿವಾಸಿಗಳು ಮೀಟರ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದರೆ ಅವರಿಗೆ ವಿದ್ಯುತ್ ಕಂಬ ಸ್ಥಾಪಿಸಿ ವಿದ್ಯುತ್ ಸೌಲಭ್ಯ ಕ
ಲ್ಪಿಸಲಾಗುವುದು ಎಂದು ಜೆಸ್ಕಾಂ ಶಾಖಾಧಿಕಾರಿ ಮೋಹನ ರಾಠೋಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.