ADVERTISEMENT

ಬಸ್ಸಿನ ಮುಖ ನೋಡದ ಊರು!

ಚಿಂತಕುಂಟಾ: ಮೂಲಸೌಕರ್ಯ ವಂಚಿತ ಗ್ರಾಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 17:22 IST
Last Updated 14 ಜುಲೈ 2018, 17:22 IST
ಚಿಂಚೋಳಿ ತಾಲ್ಲೂಕು ಚಿಂತಕುಂಟಾ ಗ್ರಾಮದಲ್ಲಿ ಕೆಸರು ಕೊಚ್ಚೆಯ ರಸ್ತೆ
ಚಿಂಚೋಳಿ ತಾಲ್ಲೂಕು ಚಿಂತಕುಂಟಾ ಗ್ರಾಮದಲ್ಲಿ ಕೆಸರು ಕೊಚ್ಚೆಯ ರಸ್ತೆ   

ಚಿಂಚೋಳಿ: ತಾಲ್ಲೂಕಿನ ಚಿಂತಕುಂಟಾ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದರಿಂದ ಜನರು ಕೆಸರು ಕೊಚ್ಚೆಯಲ್ಲಿ ನಡೆಯುವುದು ಅನಿವಾರ್ಯವಾಗಿದೆ.

ಉಮ್ಮರ್ಗಾ ಸುಲೇಪೇಟ ರಾಜ್ಯ ಹೆದ್ದಾರಿ 32ರಲ್ಲಿ ಬರುವ ನಾವದಗಿ ಗ್ರಾಮದಿಂದ ಒಂದುವರೆ ಕಿ.ಮೀ ಅಂತರದಲ್ಲಿರುವ ಚಿಂತಕುಂಟಾ ಗ್ರಾಮವೂ ಈವರೆಗೆ ಸಾರಿಗೆ ಬಸ್ಸಿನ ಮುಖವನ್ನೇ ನೋಡಿಲ್ಲ. ಹಲಚೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಿಂತಕುಂಟಾ ಗ್ರಾಮದಲ ಕೂಡು ರಸ್ತೆಯೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಯ ಅಗಲ ಕಿರಿದಾಗಿದ್ದು ರಸ್ತೆ ಮೇಲೆ ಒಂದು ವಾಹನ ಬಂದರೆ ಎದುರಿನ ಮತ್ತೊಂದು ವಾಹನ ಬದಿಗೆ ಸರಿದು ಹೋಗುವಂತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ.

ವಿಚಿತ್ರ ಎಂದರೆ ಈ ಊರಿಗೆ ಸಾರಿಗೆ ಬಸ್‌ ಬಂದರೂ ಅದು ಗ್ರಾಮದಿಂದ ತಿರುಗಿ ಹೋಗಲು ಸಾಧ್ಯವಾಗುವುದಿಲ್ಲ. ಇಲ್ಲಿ ಬಸ್‌ ತಿರುಗಲು ಅಗಲವಾದ ಜಾಗವಿಲ್ಲ.ಗ್ರಾಮದ ಒಳಗಿನರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಮುಖ್ಯ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕೆಸರುಕೊಚ್ಚೆಯಿಂದ ಕೂಡಿದ್ದು ನಿತ್ಯ ಜನರ ಜೀವ ಹಿಂಡುತ್ತಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಚನ್ನಪ್ಪ ಹೂಗಾರ.

ADVERTISEMENT

ಚರಂಡಿಗಳು ಹಾಗೂ ಒಳರಸ್ತೆಗಳು ಇಲ್ಲವೇ ಇಲ್ಲ. ಇದರಿಂದ ಮಳೆ ನೀರು ಮನೆಗಳ ಬಚ್ಚಲು ನೀರು ಹರಿಯಲು ರಸ್ತೆಯನ್ನೇ ಅವಲಂಭಿಸಿವೆ. ಜತೆಗೆ ಮಹಿಳೆಯರಿಗೆ ಶೌಚಾಲಯ ಸೌಲಭ್ಯದ ಕೊರತೆಯಿದೆ. ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯೂ ಶೋಚನೀಯವಾಗಿದೆ. ಶಾಲೆಯ ಸುತ್ತಲೂ ಗಿಡಗಂಟೆಗಳು ಬೆಳೆದಿವೆ. ಆದರೆ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ ಎಂಬುದು ಸ್ಥಳೀಯರ ಅಳಲು.

200ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ 600 ಮತದಾರರಿದ್ದಾರೆ, ಸಮುದಾಯದಿಂದ ಶಾಲೆಯ ಕಡೆಗೆ ಹೋಗುವ ರಸ್ತೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಹೈದರಾಬಾದ ಕರ್ನಾಟಕ ಅಭಿವೃದ್ದಿ ಮಂಡಳಿಯ ನೆರವಿನಲ್ಲಿ ₹10 ಲಕ್ಷ ಮಂಜೂರು ಮಾಡಲಾಗಿದೆ. ಪಂಚಾಯತ ರಾಜ್‌ ತಾಂತ್ರಿಕ ಉಪ ವಿಭಾಗದ ಉಸ್ತುವಾರಿಯಲ್ಲಿ ಗುತ್ತಿಗೆದಾರರು ಕೇವಲ ಮುರುಮ್‌ ಹಾಕಿ ಕಾಮಗಾರಿ ಆದರೆ ಮುಂದಿನ ಕೆಲಸ ಮಾಡಿಲ್ಲ.


ಆದರೆ ಗ್ರಾಮದ ಮಧ್ಯದಲ್ಲಿ ಹೆಚ್ಚಿನ ಕೆಸರುಮಯ ರಸ್ತೆಯಿದೆ. ಇಲ್ಲಿ ಸಿಮೆಂಟ್‌ ರಸ್ತೆ ಮತ್ತು ಚರಮಡಿಯ ಅಗತ್ಯವಿದ್ದು ಇದಕ್ಕೆ ಸರ್ಕಾರದ ಅನುದಾನಕ್ಕಾಗಿ ಕಾಯುವಂತಾಗಿದೆ. ಸಮಸ್ಯೆಗಳಿಂದ ಬೇಸತ್ತ ಜನರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪಹಾಕುತ್ತಿದ್ದಾರೆ. ನಮಗೆ ಕೆಸರು ಕೊಚ್ಚೆಯಿಂದ ಮುಕ್ತಿಕೊಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.