ADVERTISEMENT

ಕವಿಗೋಷ್ಠಿಗೆ ಇಲ್ಲ ‘ಸೆನ್ಸಾರ್‌’: ಮನು ಬಳಿಗಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 20:00 IST
Last Updated 6 ಜನವರಿ 2020, 20:00 IST
ಮನು ಬಳಿಗಾರ
ಮನು ಬಳಿಗಾರ   

ಕಲಬುರ್ಗಿ: ‘85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಗೆ ಆಯ್ಕೆಯಾಗುವ ಕವಿಗಳು ತಾವು ವಾಚಿಸುವ ಕವನದ ಪ್ರತಿಯನ್ನು ಮುಂಚಿತವಾಗಿಯೇ ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಕವಿಗೋಷ್ಠಿಗೂ ಸೆನ್ಸಾರ್‌ ಬಂತೇ' ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ, ‘ನಿಯಮ ಬದಲಿಸಿಲ್ಲ, ಸೆನ್ಸಾರ್‌ ಇಲ್ಲವೇ ಇಲ್ಲ. ಇದೆಲ್ಲ ಸುಳ್ಳು. ಹಿಂದಿನ ಸಮ್ಮೇಳನಗಳ ಮಾದರಿಯಲ್ಲೇ ಈ ಬಾರಿಯ ಗೋಷ್ಠಿಗಳು ನಡೆಯಲಿವೆ. ಕಲಬುರ್ಗಿ ಸಮ್ಮೇಳನದಲ್ಲಿಯೂ ಮುಖ್ಯ ವೇದಿಕೆ ಮತ್ತು ಎರಡು ಸಮಾನಾಂತರ ವೇದಿಕೆಗಳಲ್ಲಿ ತಲಾ ಒಂದರಂತೆ ಮೂರು ಕವಿಗೋಷ್ಠಿ ಇರಲಿವೆ’ ಎಂದರು.

ADVERTISEMENT

ಪುಸ್ತಕ ಬಿಡುಗಡೆ: ‘ಹಿಂದಿನ ಸಮ್ಮೇಳನಗಳ ಸಂದರ್ಭದಲ್ಲಿ ಪ್ರಕಟಿಸಿರುವ ಪುಸ್ತಕಗಳ ಒಂದು ಪ್ರತಿಯೂ ಮಾರಾಟವಾಗಿಲ್ಲ. ಒಂದೇ ಜಿಲ್ಲೆಯವರ 85 ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಮನಸ್ಸು ನಮಗಿಲ್ಲ. ಆದಾಗ್ಯೂ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪುಸ್ತಕ ಪ್ರಕಟಿಸಿ ಎಂದು ಈ ವರೆಗೂ ಯಾವ ಲೇಖಕರೂ ಪರಿಷತ್‌ಗೆ ಕರಡು ಪ್ರತಿ ಕಳಿಸಿಲ್ಲ. ಕರಡು ಪ್ರತಿ ಕಳಿಸಿದ್ದರೆ ಮತ್ತು ಅವು ಮೌಲಿಕವಾಗಿದ್ದರೆ ಪರಿಗಣಿಸುತ್ತಿದ್ದೆವು. ಆದಾಗ್ಯೂ ಪರಿಷತ್‌ನಿಂದ ಮುದ್ರಿಸುವಹಾಗೂ ಮರು ಮುದ್ರಣಗೊಂಡ ಕೃತಿಗಳನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದು ಮನು ಬಳಿಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.