ADVERTISEMENT

ಕಲಬುರಗಿ: ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರ, ಪರಿಷತ್ ಸದಸ್ಯರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 21:46 IST
Last Updated 17 ನವೆಂಬರ್ 2021, 21:46 IST
   

ಕಲಬುರಗಿ: ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲುಬಿಜೆಪಿಯ ಏಳು ಜನ ವಿಧಾನ ಪರಿಷತ್ ಸದಸ್ಯರು ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಕಲಬುರಗಿ ಮಹಾನಗರ ಪಾಲಿಕೆಯಕಾಂಗ್ರೆಸ್ ಸದಸ್ಯರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠವು, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಈ ಏಳೂ ವಿಧಾನ ಪರಿಷತ್‌ ಸದಸ್ಯರಿಗೆ ಹಾಗೂ ಸರ್ಕಾರಕ್ಕೆ ನೋಟಿಸ್ ನೀಡಲು ಸೂಚಿಸಿತು.

‘ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ರಘುನಾಥ ಮಲ್ಕಾಪುರೆ, ಡಾ. ತಳವಾರ ಸಾಬಣ್ಣ ಅವರು ಅರ್ಜಿ ಸಲ್ಲಿಸಿದ್ದಾರೆ. ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ ನೀಡಬಾರದು‌’ ಎಂದು ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರಾದ ವರ್ಷಾ ಜಾನೆ ಹಾಗೂ ತೃಪ್ತಿ ಲಾಖೆ ಅವರು ರಿಟ್ ಅರ್ಜಿ ‌ಸಲ್ಲಿಸಿದ್ದರು.

ಬುಧವಾರ ‌ಅರ್ಜಿಯ ವಿಚಾರಣೆ ‌ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠ, ಇದೇ 29ಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಅರ್ಜಿದಾರರ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲ ಎ.ಎಸ್.‌ ಪೊನ್ನಣ್ಣ ವಾದ ಮಂಡಿಸಿದರು.

ADVERTISEMENT

‘ಪ್ರಾದೇಶಿಕ ಆಯುಕ್ತರ ನಿರ್ಧಾರದ ವಿರುದ್ಧ ದೂರು’: ‘ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನು ಮುಂದೂಡುವ ಅಗತ್ಯವೇ ಇರಲಿಲ್ಲ. ಸಕಾಲಕ್ಕೆ ಚುನಾವಣೆಗಳು ನಡೆಯಬೇಕು ಎಂದು ಭಾರತ ಚುನಾವಣಾ ಆಯೋಗವು 2016ರಲ್ಲಿ ಹೊರಡಿಸಿರುವ ಕೈಪಿಡಿಯಲ್ಲಿ ತಿಳಿಸಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರು ಸರ್ಕಾರದ ಒತ್ತಡಕ್ಕೆ ಮಣಿದು ಚುನಾವಣೆ ಮುಂದಕ್ಕೆ ಹಾಕಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಆರೋಪಿಸಿದರು.

‘ಈ ಕುರಿತು ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಚುನಾವಣೆ ಮುಂದೂಡುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ನ್ಯಾಯಬದ್ಧವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿರುವ ಪ್ರಾದೇಶಿಕ ಆಯುಕ್ತರ ವಿರುದ್ಧ ಆಯೋಗಕ್ಕೆ ದೂರು ನೀಡಲಿದ್ದೇವೆ’ ಎಂದು ಪ‍ತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.