ಕಲಬುರಗಿ: ‘ಬಿಚ್ಚು ಮನದ ಕಲಾವಿದ’, ‘ಉತ್ತರ ಕರ್ನಾಟಕದ ಧ್ರುವತಾರೆ’, ‘ನೇರ, ಸರಳ, ಭೋಲಾ ಮನುಷ್ಯ’, ‘ಚಿರಂಜೀವಿ ನಿರ್ದೇಶಕ’, ‘ಸಹಜ ನಟನೆಯ ರಂಗಕರ್ಮಿ’...
ಅ.13ರಂದು ನಿಧನರಾದ ನಟ, ರಂಗಕರ್ಮಿ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅವರಿಗೆ ನಗರದ ಕಲಬುರಗಿ ರಂಗಾಯಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನುಡಿನಮನದಲ್ಲಿ ಕೇಳಿಬಂದ ಮೆಚ್ಚುಗೆಯ ಮಾತುಗಳಿವು.
ಮೊದಲಿಗೆ ರಾಜು ತಾಳಿಕೋಟಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನಗೈದರು. ಬಳಿಕ ವೇದಿಕೆ ಏರಿ ನುಡಿನಮನ ಸಲ್ಲಿಸಿದರು. ಒಡನಾಟ ಸ್ಮರಿಸಿದರು.
ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಮಾತನಾಡಿ, ‘ರಾಜು ತಾಳಿಕೋಟಿ ಬಿಚ್ಚುಮನದ ಕಲಾವಿದ. ಮಾನಸ ಗಂಗೋತ್ರಿಯಲ್ಲಿ ಜುಳು–ಜುಳು ಹರಿಯುವ ಸ್ವಚ್ಛ ಗಂಗೆಯಂತೆ. ಅಗದೀ ಜವಾರಿ ಮನುಷ್ಯ. ನಮಗೆಲ್ಲ ಡಾ.ರಾಜ್‌ಕುಮಾರ್ ಹೇಗೋ ಈ ಭಾಗದ ಕುರಿಗಾಹಿಗಳು, ಟ್ರ್ಯಾಕ್ಟರ್ ಚಾಲಕರು, ರೈತರ ಪಾಲಿಗೆ ರಾಜು ತಾಳಿಕೋಟೆಯೂ ಹಾಗೆ. ಅವರು ಇಲ್ಲಿನ ಮಣ್ಣಿನ ಗುಣ, ಬಿಸಿಲು, ದೂಳಿನೊಂದಿಗೆ ಬೆಳೆದವರು. ತಮ್ಮದೆಯಾದ ಸಾಂಸ್ಕೃತಿಕ ನೀತಿ ಹೊಂದಿದವರು. ಜನಮಾನಸದಲ್ಲಿ ಉಳಿದ ದೊಡ್ಡ ನಕ್ಷತ್ರ. ಅವರದು ಮೇರು ವ್ಯಕ್ತಿತ್ವ, ಶುದ್ಧಾತ್ಮ’ ಎಂದು ಬಣ್ಣಿಸಿದರು.
‘ರಾಜು ತಾಳಿಕೋಟಿ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದಾಗ ಇಡೀ ಧಾರವಾಡ ಬೆಚ್ಚಿತ್ತು. ಹಲವರು ನಕ್ಕಿದ್ದರು. ಧಾರವಾಡ, ಮೈಸೂರು ಮೂಲತಃ ಸಾಂಸ್ಕೃತಿಕ ನಗರಿ. ಅಂಥದಲ್ಲಿ ರಾಜು ತಾಳಿಕೋಟಿ ಏನು ಮಾಡಬಲ್ಲರು ಎಂಬ ಕುತೂಹಲವಿತ್ತು. ವೃತ್ತಿರಂಗಭೂಮಿಯಲ್ಲಿ ಸಾಕಷ್ಟು ದುಡಿದಿದ್ದರೂ, ಆಧುನಿಕ ರಂಗಭೂಮಿಯ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಮಾಡಿದಾಗ ವೈಪರೀತ್ಯ ಕಾಣಿಸುತ್ತಿತ್ತು. ಆದರೆ, ಸತ್ತವರ ನೆರಳು ನಾಟಕ ಪ್ರದರ್ಶನ ಬಳಿಕ ಅವರ ಬಗೆಗಿನ ಗ್ರಹಿಕೆ ಬದಲಾಯಿತು’ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ರಾಜು ತಾಳಿಕೋಟಿ ಹೃದಯವಂತಿಕೆಯುಳ್ಳವರು. ನೇರ, ಸರಳ, ಭೋಲಾ ಮನುಷ್ಯ. 2024ರ ಆಗಸ್ಟ್ 16ರಂದು ನಾನು, ಅವರು ಒಟ್ಟಿಗೆ ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾಗಿದ್ದೆವು. ಅವರು ನಿರ್ದೇಶಕರಾದ ಬಳಿಕ ಧಾರವಾಡ ರಂಗಾಯಣದಲ್ಲಿ ಬಹಳಷ್ಟು ಕ್ರಿಯಾಶೀಲ ಕೆಲಸ ನಡೆದವು. ಇತ್ತೀಚೆಗೆ ಕಲಬುರಗಿಗೆ ಬಂದಿದ್ದರು. ವೃತ್ತಿ ರಂಗಭೂಮಿ ನಾಟಕ ಉದ್ಘಾಟನೆಗೆ ಬಂದಿದ್ದರು. ಅವರಿಗೆ ವೇದಿಕೆಯಲ್ಲಿ ಮಾತನಾಡಲೂ ಬಿಡದಷ್ಟು ಸಭಿಕರ ಚಪ್ಪಾಳೆ ಇತ್ತು. ಅದು ಅವರ ವರ್ಚಸ್ಸು. ಸಮಾಜದ ಕಟ್ಟಡ ಕಡೆಯ ಮನುಷ್ಯನನ್ನೂ ಅವರು ಹ್ಯಾಸದ ಮೂಲಕ ಮುಟ್ಟಿದ್ದರು’ ಎಂದು ಸ್ಮರಿಸಿದರು.
ಕಲಾವಿದ ವಿಜಯಕುಮಾರ ಸೋನಾರೆ ಮಾತನಾಡಿದರು. ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂದೆ, ಕಲಾವಿದ ವಿಶ್ವನಾಥ ತೋಟನಳ್ಳಿ ಸೇರಿದಂತೆ ಹಲವರು ಇದ್ದರು. ರಂಗಾಯಣ ರೆಪರ್ಟಿ ಕಲಾವಿದರು ‘ಗುಬ್ಬಿಯೊಂದು ಗೂಡು ಕಟ್ಯಾದೋ, ಆ ಗೂಡಿನಲ್ಲಿ ಜೀವ ಇಟ್ಟು, ಎಲ್ಲಿ ಹೋಗ್ಯಾದೋ’ ಗೀತೆ ಹಾಡಿ ರಂಗ ನಮನ ಸಲ್ಲಿಸಿದರು.
‘ಕಲಾಪ್ರಜ್ಞೆ ಮಾರ್ಗದರ್ಶನವಾಗಲಿ’
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ ‘ರಾಜು ತಾಳಿಕೋಟಿ ಅವರದ್ದು ಸಂಕೀರ್ಣ ವ್ಯಕ್ತಿತ್ವ. ರಂಗಭೂಮಿ ಕ್ಷೇತ್ರದಲ್ಲಿ ಅವರು ಹಾಸ್ಯದ ಪರಂಪರೆ ಸಹಜ ನಟನೆಯ ಪರಂಪರೆ ಬೆಳೆಸಿದರು. ಜನರ ಜೊತೆಗೆ ನಾವು ಹೇಗೆ ರಂಗಭೂಮಿ ಕಟ್ಟಬೇಕು ಎಂಬುದನ್ನು ತೋರಿಸಿದವರು. ಅವರ ದ್ವಂದ್ವಾರ್ಥದ ಸಂಭಾಷಣೆ ಸಂಕೀರ್ಣ ವ್ಯಕ್ತಿತ್ವದ ಹೊರತಾಗಿಯೂ ಅವರೊಳಗಿದ್ದ ಕಲಾಪ್ರಜ್ಞೆ ನಮ್ಮೆಲ್ಲರಿಗೂ ಮಾರ್ಗದರ್ಶನ ಆಗಬೇಕು’ ಎಂದರು.
ರಾಜು ತಾಳಿಕೋಟಿ ನಮ್ಮನ್ನೆಲ್ಲ ಅಗಲಿದರೂ ರಂಗಾಯಣದ ಶಾಶ್ವತ ಚಿರಂಜೀವಿ ನಿರ್ದೇಶಕರಾಗಿ ಉಳಿಯಲಿದ್ದಾರೆಪ್ರಭಾಕರ ಜೋಶಿ, ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.