ADVERTISEMENT

ನೂಪೂರ್,ನವೀನ್‌ ಬಂಧನಕ್ಕೆ ಒತ್ತಾಯ

ಪ್ರವಾದಿ ಮಹಮ್ಮದ್‌ ಅವರ ಅವಹೇಳನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 3:59 IST
Last Updated 12 ಜೂನ್ 2022, 3:59 IST
ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನೆ ಮಾಡಿರುವ ಬಿಜೆಪಿ ಉಚ್ಛಾಟಿತ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಬಂಧಿಸಬೇಕು ಎಂದು ಆಗ್ರಹಿಸಿ ಶನಿವಾರ ಶಹಾಬಾದ್‌ನಲ್ಲಿ ಆಶಿಕಾನೆ ರಸೂಲ್ ಕಮಿಟಿ ಸದಸ್ಯರು ಎಸ್‍ಪಿ ಇಶಾ ಪಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನೆ ಮಾಡಿರುವ ಬಿಜೆಪಿ ಉಚ್ಛಾಟಿತ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಬಂಧಿಸಬೇಕು ಎಂದು ಆಗ್ರಹಿಸಿ ಶನಿವಾರ ಶಹಾಬಾದ್‌ನಲ್ಲಿ ಆಶಿಕಾನೆ ರಸೂಲ್ ಕಮಿಟಿ ಸದಸ್ಯರು ಎಸ್‍ಪಿ ಇಶಾ ಪಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಶಹಾಬಾದ್: ಪ್ರವಾದಿ ಮಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶನಿವಾರ ನಗರದ ಮಜ್ಜಿದ್ ವೃತ್ತದಲ್ಲಿ ಆಶಿಕಾನೆ ರಸೂಲ್ ಕಮಿಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಾಧ್ಯಮವೊಂದರ ಚರ್ಚೆಯಲ್ಲಿ ಪ್ರವಾದಿ ಮಹಮ್ಮದರನ್ನು ನಿಂದಿಸಿರುವ ಬಿಜೆಪಿ ನೂಪುರ್ ಶರ್ಮಾ, ನವೀನ್ ಜಿಂದಾಲ್‌ ಅವರನ್ನು ಬಂಧಿಸಬೇಕು. ದೇಶದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಮೇಲೆ ನಿರಂತರ ಹಲ್ಲೆ, ದಾಳಿ ಮತ್ತು ಮುಸ್ಲಿಂ ಸಮುದಾಯವನ್ನು ಗುರಿ ಮಾಡುತ್ತಿರುವ ಆರ್‌ಎಸ್‍ಎಸ್ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ಮೌನ ಸಮ್ಮತಿಯನ್ನು ನೀಡುತ್ತಿದೆ. ಎಲ್ಲಾ ದುಷ್ಕರ್ಮಿಗಳಿಗೆ ಆಡಳಿತಾತ್ಮಕ ನೆರವನ್ನೂ ನೀಡುತ್ತಿದೆ ಎಂದು ಕಿಡಿಕಾರಿದರು.

ADVERTISEMENT

ಹಿಜಾಬ್‌, ಹಲಾಲ್‌ ವ್ಯಾಪಾರ ಬಹಿಷ್ಕಾರ, ಆಜಾನ್‌, ಈದ್ಗಾಗಳ ವಿವಾದ ಸೃಷ್ಟಿಸಿ ನಿರಂತರವಾಗಿ ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಸಲಾಗುತ್ತಿದೆ. ಸಾರ್ವಜನಿಕವಾಗಿ ಬಿಜೆಪಿ ಹಾಗೂ ಹಿಂದುತ್ವ ನಾಯಕರು ದ್ವೇಷ ಭಾಷಣ, ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಸರ್ಕಾರವು ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ್‌ ಅವರನ್ನು ಪಕ್ಷದಿಂದ ವಜಾಗೊಳಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ. ಪ್ರವಾದಿ ನಿಂದನೆಯನ್ನು ಮುಸ್ಲಿಂ ಸಮುದಾಯ ಯಾವ ಕಾರಣಕ್ಕೂ ಸಹಿಸುವುದಿಲ್ಲ. ಕೂಡಲೇ ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ್‌ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮುಖಂಡರಾದ ಅಬ್ದುಲ್ ಖಾದಿರ್ ಸಾಬ್, ಮಹಮ್ಮದ ಮಸ್ತಾನ, ಮತೀನ ಪಟೇಲ, ಸೈಯದ್ ಲಾಡ್ಲೆ ಹುಸೇನಿ, ಅಪ್ಸರ ಸೇಠ್, ರಫೀಕ್ ಬಾಗಬಾನ್, ಮೌಲನ ಹಿದಾಯತ ಅಲಿ, ಮುಬಿನ್ ಅಲಿ, ಅಕ್ಬರ್ ಚಿಟ್, ಮೆಹಬೂಬ್ ಪಟೇಲ್, ಹಾಷಮ್ ಖಾನ, ಮಹಮ್ಮದ ಉಬೆದುಲ್ಲಾಹ್,ಡಾ. ಅಹ್ಮದ್ ಪಟೇಲ, ಮಹಮ್ಮದ್ ಫಾರೂಕ್, ಮಹಮ್ಮದ್ ಜೀಲಾನಿ ಶಾಹ್ , ನದೀಮ್ ಶಾಂತ ನಗರ, ಜಾವೀದ್ ಮಡ್ಡಿ, ನೂರುದ್ದೀದಿನ್ ಪಟೇಲ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಉಮೇಶ ಚಿಕ್ಕಮಠ ಮತ್ತು ಪಿಐ ಸಂತೋಷ ಹಳ್ಳೂರ್ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.