ADVERTISEMENT

ಸಿಯುಕೆ ಆನ್‌ಲೈನ್, ಗುವಿವಿ ಆಫ್‌ಲೈನ್

ಸೆ 30ರೊಳಗೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ನಿರ್ಧಾರ

ಮನೋಜ ಕುಮಾರ್ ಗುದ್ದಿ
Published 8 ಆಗಸ್ಟ್ 2020, 4:02 IST
Last Updated 8 ಆಗಸ್ಟ್ 2020, 4:02 IST
ಎಚ್.ಎಂ.ಮಹೇಶ್ವರಯ್ಯ
ಎಚ್.ಎಂ.ಮಹೇಶ್ವರಯ್ಯ   

ಕಲಬುರ್ಗಿ: ಕೊರೊನಾ ಸೋಂಕಿನಿಂದಾಗಿ ಪರೀಕ್ಷೆಗಳನ್ನು ಮುಂದೂಡಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಲು ತೀರ್ಮಾನಿಸಿವೆ.

ಕೇಂದ್ರೀಯ ವಿ.ವಿ.ಯು ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದ್ದರೆ, ಗುಲಬರ್ಗಾ ವಿ.ವಿ. ಸಾಂಪ್ರದಾಯಿಕವಾಗಿ ಆಫ್‌ಲೈನ್‌ ಮೂಲಕವೇ ನಡೆಸಲಿದೆ.

ಕೇಂದ್ರೀಯ ವಿ.ವಿ.ಯಲ್ಲಿ ಓದುತ್ತಿರುವ 1900 ವಿದ್ಯಾರ್ಥಿಗಳ ಪೈಕಿ 691 ವಿದ್ಯಾರ್ಥಿಗಳು ಆನ್‌ಲೈನ್‌ ಪರೀಕ್ಷೆ ಬರೆಯಲಿದ್ದು, ಎರಡೂವರೆ ಗಂಟೆ ಅವಧಿಯನ್ನು ನಿಗದಿ ಮಾಡಲಾಗಿದೆ.

ADVERTISEMENT

‘ಆನ್‌ಲೈನ್‌ನಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ವೀಕ್ಷಿಸಬಹುದು. ಅಲ್ಲದೇ, ನಕಲು ಮಾಡಿದರೆ ನಮ್ಮಲ್ಲಿ ಪತ್ತೆ ಮಾಡಬಹುದಾದ ಸಾಫ್ಟ್‌ವೇರ್‌ ಇದೆ. ಇಬ್ಬರು ವಿದ್ಯಾರ್ಥಿಗಳು ನಕಲು ಮಾಡಿ ಒಂದೇ ರೀತಿ ಉತ್ತರ ಬರೆದಿದ್ದರೆ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದಿಲ್ಲ’ ಎಂದು ವಿ.ವಿ. ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಆಗಸ್ಟ್‌ 4, 5 ಹಾಗೂ 6ರಂದು ಆನ್‌ಲೈನ್‌ ಮೂಲಕ ಅಣಕು ಪರೀಕ್ಷೆಯನ್ನು ನಡೆಸಲಾಗಿದೆ. 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು ನಮ್ಮಲ್ಲಿ ಭರವಸೆ ತಂದಿದೆ. ದೇಶದ ಎಲ್ಲ ಕೇಂದ್ರೀಯ ವಿ.ವಿ.ಗಳಲ್ಲಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗುಲಬರ್ಗಾ ವಿ.ವಿ.ಯಲ್ಲಿ ಆಫ್‌ಲೈನ್ ಪರೀಕ್ಷೆ: ಗುಲಬರ್ಗಾ ವಿ.ವಿ.ಯು ಸಾಂಪ್ರದಾಯಿಕವಾಗಿ ಆಫ್‌ಲೈನ್‌ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಮೊದಲ ಹಂತದಲ್ಲಿ ಸೆಪ್ಟೆಂಬರ್‌ 4ರಿಂದ 24ರವರೆಗೆ ಪದವಿ ಪರೀಕ್ಷೆಗಳು ನಡೆಯಲಿದ್ದು, ಸ್ನಾತಕೋತ್ತರ ಪರೀಕ್ಷೆಯ ದಿನಾಂಕವನ್ನು ಮುಂದಿನ ವಾರ ನಡೆಯಲಿರುವ ವಿವಿಧ ನಿಕಾಯಗಳ ಡೀನ್‌ಗಳ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.