ಸಾಂದರ್ಭಿಕ ಚಿತ್ರ
ಕಲಬುರಗಿ: ಆನ್‌ಲೈನ್ ಜೂಜಾಟದ ವ್ಯಸನಕ್ಕೆ ಸಿಲುಕಿಕೊಂಡಿದ್ದ ವಿದ್ಯಾರ್ಥಿ ಅದಕ್ಕಾಗಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಒತ್ತಡಕ್ಕೆ ಸಿಲುಕಿ ನಗರದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಡೋಣಗಾಪುರ ಗ್ರಾಮದ ನಿವಾಸಿ ಸೋಮನಾಥ ಚಿದ್ರಿ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಸೋಮನಾಥ ಚಿದ್ರಿ
ಆನ್‌ಲೈನ್ ಜೂಜಿನ ಮೋಹಕ್ಕೆ ಬಿದ್ದಿದ್ದ ಸೋಮನಾಥ ₹ 80 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದ. ಒಂದಷ್ಟು ಹಣವನ್ನು ಶೇ 4ರಿಂದ ಶೇ 10ರ ಬಡ್ಡಿ ದರದಲ್ಲಿ ತಂದಿದ್ದ. ನಂತರ ಸಾಲಗಾರರ ಕಾಟದಿಂದ ಬೇಸತ್ತು ನಗರದ ವೀರಶೈವ ಹಾಸ್ಟೆಲ್ ಸಮೀಪದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ ಸಾಲ ಮಾಡಿರುವುದು ಗೊತ್ತಿದ್ದ ತಂದೆ ಸತೀಶಕುಮಾರ್ ಒಂದಷ್ಟು ಸಾಲ ತೀರಿಸುತ್ತಿದ್ದರು. ಮತ್ತೆ ತಂದೆಗೆ ಕರೆ ಮಾಡಿ ₹ 30 ಸಾವಿರ ಕಳಿಸುವಂತೆ ಬೇಡಿಕೆ ಸಲ್ಲಿಸಿದ್ದ. ನಾಳೆ ಕೊಡುವುದಾಗಿ ಹೇಳಿದ್ದರು. ಅಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ‘ಆನ್‌ಲೈನ್ ಜೂಜಾಟದಿಂದ ₹ 70 ಲಕ್ಷದಿಂದ ₹ 80 ಲಕ್ಷ ಹಣ ಕಳೆದುಕೊಂಡಿದ್ದ ಎಂದು ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.