ADVERTISEMENT

ಚಿತಲಿ: ಶೌಚಾಲಯ ಸಮಸ್ಯೆ; ನಿಲ್ಲದ ಬಹಿರ್ದೆಸೆ

ಚಿತಲಿ ಗ್ರಾಮದಲ್ಲಿ 2 ದಿನಕೊಮ್ಮೆ ನೀರು; ಬಸ್‌ ಸೌಲಭ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 4:10 IST
Last Updated 15 ಸೆಪ್ಟೆಂಬರ್ 2020, 4:10 IST
ಆಳಂದ ತಾಲ್ಲೂಕಿನ ಚಿತಲಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವು ಬಳಕೆಯಾಗದೆ ಪಾಳು ಬಿದ್ದಿದೆ
ಆಳಂದ ತಾಲ್ಲೂಕಿನ ಚಿತಲಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವು ಬಳಕೆಯಾಗದೆ ಪಾಳು ಬಿದ್ದಿದೆ   

ಆಳಂದ: ತಾಲ್ಲೂಕಿನ ಚಿತಲಿ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಗ್ರಾಮದ ಅರ್ಧದಷ್ಟು ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿದೆ.

ಕಿಣಿಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಅಂದಾಜು 1,600 ಜನಸಂಖ್ಯೆ ಇದೆ. 2016ರಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ₹ 10ಲಕ್ಷ ವೆಚ್ಚ ಮಾಡಿ ಶೌಚಾಲಯ ನಿರ್ಮಾಣವಾಗಿದೆ. ಅಸಮರ್ಪಕ ಕಾಮಗಾರಿಯಿಂದ ಅದು ಬಳಕೆಗೆ ಬಾರದಂತಾಗಿದೆ. ಬಂಗರಗಿ, ಕಿಣಗಿ, ತೆಲಕುಣಿ ಗ್ರಾಮದ ಕಾಲುದಾರಿ ಹಾಗೂ ಮುಖ್ಯರಸ್ತೆ ಸುತ್ತ ಬಹಿರ್ದೆಸೆಗೆ ಹೋಗಲು ಕತ್ತಲು ಆಗುವರೆಗೂ ಕಾಯುವ ಸ್ಥಿತಿಗೆ ಗ್ರಾಮದ ಮಹಿಳೆಯರಲ್ಲಿ ಆಕ್ರೋಶ ಇದೆ.

ಆಳಂದ– ಖಜೂರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚಿತಲಿ ಗ್ರಾಮಕ್ಕೆ ಬಸ್‌ ಸಂಪರ್ಕವೇ ಇಲ್ಲ. ಗ್ರಾಮಸ್ಥರಿಗೆ ಬಸ್‌ ಹಿಡಿಯಲು 1 ಕಿ.ಮೀ ಕಾಲ್ನಡಿಗೆ ಅನಿವಾರ್ಯವಾಗಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಮಳೆಗಾಲ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚು ಕಷ್ಟ ಅನುಭವಿಸುತ್ತಾರೆ ಎಂದು ಗ್ರಾಮಸ್ಥ ಸುಧಾಕರ ಹಸೂರೆ ತಿಳಿಸಿದರು.

ADVERTISEMENT

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ರೈತರು ಎತ್ತಿನ ಬಂಡಿ, ಬೈಕ್, ಜೀಪ್‌ ಮತ್ತಿತರ ವಾಹನಗಳಲ್ಲಿ ಸಂಚರಿಸಿ ಹರಸಾಹಸ ಪಟ್ಟು ಮನೆ ತಲುಪುತ್ತಾರೆ. ಮುಖ್ಯ ರಸ್ತೆಯ ಕ್ರಾಸ್‌ ಮೇಲೆ ಬಸ್‌ ನಿಲ್ದಾಣ, ವಿದ್ಯುತ್‌ ವ್ಯವಸ್ಥೆ ಇಲ್ಲ. ಬಿಸಿಲಲ್ಲಿ ನಿಂತು ವಾಹನ ಕಾಯುವುದು ಭಯಕ್ಕೆ ಕಾರಣವಾಗಿದೆ.

ತೋಟಗಾರಿಕೆ ಬೆಳೆಗೆ ಚಿತಲಿ ಗ್ರಾಮ ಹೆಸರುವಾಸಿಯಾದರೂ ಗ್ರಾಮಕ್ಕೆ ಕುಡಿಯುವ ನೀರಿನ ತಾಪತ್ರಯ ತಪ್ಪಿಲ್ಲ. ಸಾಲೇಗಾಂವ ಕೆರೆಯಿಂದ ನೀರು ಸರಬುರಾಜು ವ್ಯವಸ್ಥೆ ಇದೆ. ಎರಡು ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ದಿನಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ.

ಗ್ರಾಮದ ಹನುಮಾನ ಮಂದಿರ, ಭೀಮನಗರದ ಕೆಲವು ಓಣಿಗಳಲ್ಲಿ ಮಾತ್ರ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಒಳ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ಚರಂಡಿ ನಿರ್ಮಿಸದ ಕಾರಣ ಮಳೆ ಮತ್ತುಬಚ್ಚಲು ನೀರು ರಸ್ತೆ ಮೇಲೆ ಹರಿದಾಡುವ ದೃಶ್ಯ ಕಾಣುವುದು. ದುರ್ನಾತದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಮುಖಂಡ ಅಂಬರಾಯ ಜಮದಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.