ADVERTISEMENT

ಮತ್ತೆ ಮರುಕಳಿಸಿದ ಗೋಡೆ ಮೇಲೆ 'ಪಾಕಿಸ್ತಾನ ಜಿಂದಾಬಾದ್' ಬರಹ: ತನಿಖೆಗೆ ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:35 IST
Last Updated 2 ಮಾರ್ಚ್ 2020, 10:35 IST
ಕಲಬುರ್ಗಿಯ ಮನೆಯ ಗೋಡೆ ಮೇಲೆ ಬರೆಯಲಾದ ಪಾಕಿಸ್ತಾನ ಪರ ವಾಕ್ಯಗಳು
ಕಲಬುರ್ಗಿಯ ಮನೆಯ ಗೋಡೆ ಮೇಲೆ ಬರೆಯಲಾದ ಪಾಕಿಸ್ತಾನ ಪರ ವಾಕ್ಯಗಳು   

ಕಲಬುರ್ಗಿ: ಇಲ್ಲಿಯ ದರ್ಗಾ ರಸ್ತೆಯ ಸಾಥ್ ಗುಂಬಜ್ ಬಳಿ ದುಷ್ಕರ್ಮಿಗಳು ಭಾನುವಾರ ಕಿಶನರಾವ್ ಹಾಗರಗುಂಡಗಿ‌ ಎಂಬುವರ ಮನೆ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಹಾಗೂ ಪ್ರಧಾನಿ ಅವರನ್ನು ‌ನಿಂದಿಸಿರುವ ಬರಹವನ್ನು ಬರೆದಿದ್ದಾರೆ.

ಶನಿವಾರ ರಾತ್ರಿ ಬರೆದಿರುವ ಶಂಕೆಯಿದ್ದು, ಸ್ಥಳಕ್ಕೆ ‌ಬಂದು ಪರಿಶೀಲಿಸಿದ ಚೌಕ್ ಠಾಣೆ ಪೊಲೀಸರು ಬರಹವನ್ನು ‌ಅಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಜನರು ಮನೆಯ ಬಳಿ ಬಂದು ಗೋಡೆ ವೀಕ್ಷಿಸಿದರು. ಮುಂಜಾಗ್ರತಾ ಕ್ರಮ ಕೈಗೊಂಡ ಪೊಲೀಸರು ಬರಹವನ್ನು ಅಳಿಸಿ ಹಾಕಿದ್ದು, ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಮ್ಮ ಕಟ್ಟಡದ ಗೋಡೆಯ ಮೇಲೆ ದೇಶದ್ರೋಹಿ ಬರಹವನ್ನು ಬರೆದಿದ್ದನ್ನು ವಿರೋಧಿಸಿದ ಕಟ್ಟಡದಲ್ಲಿ ವಾಸವಾಗಿರುವ ಮನೋಜ್ ಚೌಧರಿ ಅವರು ಆನಂದ ಚವ್ಹಾಣ, ಸಿದ್ದರಾಜ ಬಿರಾದಾರ, ಪ್ರದೀಪ, ಪ್ರಶಾಂತ ಗುಡ್ಡಾ, ಮಹೇಶ ಪಾಟೀಲ ಅವರ ಜತೆ ಚೌಕ್ ಠಾಣೆಗೆ ತೆರಳಿ ದೇಶದ್ರೋಹದ ದೂರು ಸಲ್ಲಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದರು.

ವಿಷಯ ಗಮನಕ್ಕೆ ಬರುತ್ತಲೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಸಾಥ್‍ ಗುಂಬಜ್‌ ಪ್ರದೇಶದಲ್ಲಿ ಪಾಕ್ ಪರ ಬರಹ ಬರೆದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದರು.

ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ, ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ಶ್ವೇತಾ ಓಂಪ್ರಕಾಶ, ಉಮೇಶ ಪಾಟೀಲ್, ಮಹೇಶ ಕೆ. ಪಾಟೀಲ್, ಸಿದ್ದರಾಜ ಬಿರಾದಾರ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು.

ಠಾಣೆಗೆ ನುಗ್ಗಿದ ಕೆಲವರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.ನಂತರ ಚೌಕ್ ಠಾಣೆಯಿಂದ ಮೆರವಣಿಗೆ ಮೂಲಕ ಸಾಥ್ ಗುಂಬಜ್ ಹತ್ತಿರ ಬಂದು ಅಲ್ಲಿ ರಸ್ತೆ ತಡೆ ನಡೆಸಿದರು. ಭಾರತ ಮಾತಾಕಿ ಜೈ, ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿದರು.

ಪ್ರಮುಖರು ಪೊಲೀಸ್ ಕಮಿಷನರ್‌ ಎಂ.ಎನ್. ನಾಗರಾಜ ಅವರನ್ನು ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಕಲಬುರ್ಗಿ ಬಂದ್‍ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರೋಪಿಗಳ ಪತ್ತೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಯಾವುದಕ್ಕೂ ಉದ್ವೇಗಕ್ಕೆ ಒಳಗಾಗಬೇಡಿ ಎಂದು ಭರವಸೆ ನೀಡಿದರು.

ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ
ಕಲಬುರಗಿ ನಗರದ ಸಾಥ್ ಗುಂಬಜ್ ಬಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಬರೆದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಡಿಸಿಪಿ ಕಿಶೋರಬಾಬು ಅವರ ನೇತೃತ್ವದಲ್ಲಿ ಎಸಿಪಿ ಗಿರೀಶ ಸೇರಿದಂತೆ ಐವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಬರಹ ನಮಗೂ ಶಾಕ್ ತಂದಿದೆ. ಈ ರೀತಿಯ ರೀತಿಯ ಬರಹಗಳನ್ನು ಬರೆದವರನ್ನು ಪತ್ತೆ ಮಾಡಲು ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.