ADVERTISEMENT

ಪಿಡಿಒ, ಬಿಲ್‌ಕಲೆಕ್ಟರ್‌ನಿಂದ ₹2.27 ಲಕ್ಷ ದುರುಪಯೋಗ: ಬಾಬುರಾವ ಚವ್ಹಾಣ ಆರೋಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:54 IST
Last Updated 21 ಆಗಸ್ಟ್ 2025, 5:54 IST
ಬಾಬುರಾವ ಚವ್ಹಾಣ
ಬಾಬುರಾವ ಚವ್ಹಾಣ   

ಕಲಬುರಗಿ: ‘ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಅಲ್ಲೂರ(ಬಿ) ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಪ್ರಕಾಶ ಬಾಬು ಹಾಗೂ ಬಿಲ್‌ ಕಲೆಕ್ಟರ್‌ ಸಾಬಣ್ಣಾ ತಳವಾರ ಅವರು ಕರ ವಸೂಲಿ ಮಾಡಲಾದ ₹2,27,575 ಅನ್ನು ತಮ್ಮ ಕುಟುಂಬಸ್ಥರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಡಿಒ ಅವರ ಅಳಿಯ ಪರಶುರಾಮ ಮತ್ತು ಬಿಲ್‌ ಕಲೆಕ್ಟರ್‌ ಅವರ ಪತ್ನಿ ಭಾಗಮ್ಮ ಮತ್ತು ಮಕ್ಕಳ ಖಾತೆಗಳಿಗೆ ಒಟ್ಟು ₹2.75 ಲಕ್ಷ ವರ್ಗಾವಣೆಯಾಗಿದೆ’ ಎಂದು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪ್ರತಿಯನ್ನು ಪ್ರದರ್ಶಿಸಿದರು.

‘ಕರ ವಸೂಲಿ ಹಣ ದುರುಪಯೋಗ ಮತ್ತು ನಮೂನೆ 9 ಮತ್ತು 11 ಮಾಡಿಕೊಡಲು ಪಿಡಿಒ ಅವರು ಸಾರ್ವಜನಿಕರಿಂದ ₹9 ಸಾವಿರದಿಂದ ₹10 ಸಾವಿರ ಲಂಚ ಪಡೆಯುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಲಿಂಗಪ್ಪ ಮತ್ತು ಸದಸ್ಯರು ತಾಲ್ಲೂಕು ಪಂಚಾಯಿತಿ ಇಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ದೇಶ, ವಿದೇಶದ ಬೆಳವಣಿಗೆಗಳ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲೇ ಅವ್ಯವಹಾರ ನಡೆಯುತ್ತಿದ್ದರೂ ಸುಮ್ಮನಿದ್ದಾರೆ. ತಾಲ್ಲೂಕು ಪಂಚಾಯಿತಿ ಸಭೆ ನಡೆಸಿ, ಪಿಡಿಒಗಳ ಅವ್ಯವಹಾರಕ್ಕೆ ಕಡಿವಾಣ ಹಾಕುತ್ತಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಆನ್‌ಲೈನ್‌ ಮೂಲಕವೇ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ದೂರಿದರು.

‘ಪಿಡಿಒ ಮತ್ತು ಬಿಲ್‌ ಕಲೆಕ್ಟರ್‌ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು. ಹಣ ದುರುಪಯೋಗ ರುಜುವಾತಾದರೆ ಕ್ಷೇತ್ರದ ಶಾಸಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವರಾಗಿರುವ ಪ್ರಿಯಾಂಕ್‌ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಬಾಬು ಪವಾರ, ಪ್ರೇಮಕುಮಾರ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.