ADVERTISEMENT

ವಾರದಲ್ಲಿ ಎಲ್ಲ ಅರ್ಜಿ ಇತ್ಯರ್ಥಪಡಿಸಲು ಸೂಚನೆ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ಕಾರಿ ನೌಕರರ ಪಿಂಚಣಿ ಅದಾಲತ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 15:22 IST
Last Updated 23 ಆಗಸ್ಟ್ 2019, 15:22 IST
ಅದಾಲತ್‌ನಲ್ಲಿ ಪಿಂಚಣಿದಾರರೊಬ್ಬರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್‌ ಅವರಿಗೆ ಅಹವಾಲು ಸಲ್ಲಿಸಿದರು. ಜಿ.ಪಂ. ಸಿಇಒ ಡಾ.ಪಿ.ರಾಜಾ ಹಾಗೂ ಇತರ ಅಧಿಕಾರಿಗಳು ಇದ್ದರು
ಅದಾಲತ್‌ನಲ್ಲಿ ಪಿಂಚಣಿದಾರರೊಬ್ಬರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್‌ ಅವರಿಗೆ ಅಹವಾಲು ಸಲ್ಲಿಸಿದರು. ಜಿ.ಪಂ. ಸಿಇಒ ಡಾ.ಪಿ.ರಾಜಾ ಹಾಗೂ ಇತರ ಅಧಿಕಾರಿಗಳು ಇದ್ದರು   

ಕಲಬುರ್ಗಿ: ‘ಸರ್ಕಾರಿ ನೌಕರಿಯಿಂದ ನಿವೃತ್ತಿಯಾದ ಬಳಿಕ ಪಿಂಚಣಿ ಸೌಲಭ್ಯ ಎಲ್ಲರಿಗೂ ದೊರೆಯಬೇಕು. ತಾಂತ್ರಿಕ ಕಾರಣಗಳಿಂದ ಕೆಲವರಿಗೆ ವಿಳಂಬವಾಗಿದ್ದು, ಇಂತಹ ಪ್ರಕರಣಇತ್ಯರ್ಥಪಡಿಸಲು ಜಿಲ್ಲಾಡಳಿತ ಉಪಸಮಿತಿಯನ್ನು ರಚಿಸಿದೆ. ಇದು ಎಲ್ಲ ಅರ್ಜಿಗಳನ್ನು ವಾರದೊಳಗೆ ಇತ್ಯರ್ಥಪಡಿಸಲಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ತಿಳಿಸಿದರು.

ಪಿಂಚಣಿ, ಸಣ್ಣ ಉಳಿತಾಯ ಮತ್ತು ಋಣ–ಆಸ್ತಿ ಉಳಿತಾಯ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಶುಕ್ರವಾರ ಇಲ್ಲಿ ನಡೆದ ಪಿಂಚಣಿ ಅದಾಲತ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಹಳ ದಿನಗಳಿಂದ ಪಿಂಚಣಿ ಬಾರದೇ ಇರುವವರು ಲಿಖಿತ ದೂರನ್ನು ಸಲ್ಲಿಸಿದರೆ ಅದಾಲತ್‌ನಲ್ಲಿ ಪರಿಹರಿಸಲಾಗುವುದು. ಸಭೆಯಲ್ಲಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು, ಪಿಂಚಣಿ ಬಟವಾಡೆ ಮಾಡುವ ವಿವಿಧ ಬ್ಯಾಂಕ್‌ ಅಧಿಕಾರಿಗಳು, ಖಜಾನೆ ಇಲಾಖೆ ಅಧಿಕಾರಿಗಳಿದ್ದು, ಬರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ADVERTISEMENT

ಎಸ್‌ಬಿಐ ಕಾರ್ಯವೈಖರಿ ಬಗ್ಗೆ ಬೇಸರ: ಸಭೆಯಲ್ಲಿ ಮಾತನಾಡಿದ ಖಜಾನೆ ಇಲಾಖೆಯ ದತ್ತಪ್ಪ ಗೊಬ್ಬೂರ, ‘ಪಿಂಚಣಿಯನ್ನು ಖಜಾನೆ ಇಲಾಖೆಯಿಂದ ಬಟವಡೆ ಮಾಡಿದರೂ ಬ್ಯಾಂಕ್‌ನಲ್ಲಿ ಪಿಂಚಣಿದಾರರಿಗೆ ಪಾವತಿಯಾಗುವುದಿಲ್ಲ ಎಂಬ ದೂರು ಬಂದಿವೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಆಳಂದ, ಚಿತ್ತಾಪುರ, ಮಾದನ ಹಿಪ್ಪರಗಾ ಶಾಖೆಗಳಲ್ಲಿ ಹೆಚ್ಚು ದೂರುಗಳು ಬಂದಿವೆ. ಪಿಂಚಣಿಯಲ್ಲೇ ಹಣ ಕಡಿತವಾಗುತ್ತಿದೆ. ಇದಕ್ಕೆ ಕಾರಣವೇನೆಂದು ಕೇಳಿದರೂ ಬ್ಯಾಂಕ್‌ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂಬ ದೂರುಗಳು ಬಂದಿವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ ಮಾತನಾಡಿದರು.

ಅದಾಲತ್‌ನಲ್ಲಿ 52 ಅರ್ಜಿಗಳ ಪೈಕಿ ನಾಲ್ಕು ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು. ಉಳಿದ ಅರ್ಜಿಗಳ ಇತ್ಯರ್ಥಕ್ಕೆ ಒಂದು ವಾರದ ಗಡುವನ್ನು ಜಿಲ್ಲಾಧಿಕಾರಿ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಿ.ಎಚ್.ಹವಾಲ್ದಾರ, ಜಿಲ್ಲಾ ಖಜಾನಾಧಿಕಾರಿ ವಿರೂಪಾಕ್ಷಪ್ಪ, ಸಣ್ಣ ಉಳಿತಾಯ ಮತ್ತು ಆಸ್ತಿ–ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ.ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.