ADVERTISEMENT

ಜೇವರ್ಗಿ: ಸೇತುವೆ ದುರಸ್ತಿ ಯಾವಾಗ?

ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ಪರದಾಟ

ವೆಂಕಟೇಶ ಆರ್.ಹರವಾಳ
Published 24 ಸೆಪ್ಟೆಂಬರ್ 2020, 2:25 IST
Last Updated 24 ಸೆಪ್ಟೆಂಬರ್ 2020, 2:25 IST
ಜೇವರ್ಗಿ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ತೆರಳುವ ರಸ್ತೆಯಲ್ಲಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಕೊಚ್ಚಿಕೊಂಡು ಹೋಗಿರುವ ದೃಶ್ಯ
ಜೇವರ್ಗಿ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ತೆರಳುವ ರಸ್ತೆಯಲ್ಲಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಕೊಚ್ಚಿಕೊಂಡು ಹೋಗಿರುವ ದೃಶ್ಯ   

ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ ಮತ್ತು ಸರ್ಕಾರಿ ವಸತಿ ಗೃಹಗಳಿಗೆ ತೆರಳುವ ಮುಖ್ಯ ರಸ್ತೆಯ ಮಧ್ಯದಲ್ಲಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ.

ಸೇತುವೆ ಹಾಳಾಗಿ ಮೂರು ತಿಂಗಳು ಗತಿಸಿದರೂ, ಇದುವರೆಗೆ ಪುನರ್‌ ನಿರ್ಮಾಣಕ್ಕೆ ಸ್ಥಳೀಯ ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಕಳೆದ ಜುಲೈ 2ರಂದು ಜೇವರ್ಗಿ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗಿ ಹಳ್ಳಕ್ಕೆ ಹರಿದ ಕಾರಣ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಸೇತುವೆಯನ್ನು ದುರಸ್ತಿಗೊಳಿಸಿದ್ದರು.

ADVERTISEMENT

ಸೇತುವೆ ಕೊಚ್ಚಿ ಹೋಗಿರು ವುದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಲೋಕೋಪಯೋಗಿ ಇಲಾಖೆ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಶಾಲೆಗಳಿಗೆ ತೆರಳುವ ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿ ದಿನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಲೋಕೋಪಯೋಗಿ ಇಲಾಖೆ ವಸತಿ ಗೃಹಗಳಿಗೆ ತೆರಳಲು ಸರ್ಕಾರಿ ನೌಕರರ ಕುಟುಂಬದ ಸದಸ್ಯರು ಹಾಗೂ ಕಚೇರಿಗೆ ತೆರಳುವ ಸಾರ್ವಜನಿಕರು ಸೇತುವೆ ದುರಸ್ತಿ ಯಾವಾಗ ಎಂದು ಪ್ರಶ್ನಿಸುವಂತಾಗಿದೆ.

ಕಳೆದ ಜುಲೈ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಸೇತುವೆ ಕೊಚ್ಚಿ ಹೋಗಿತ್ತು. ಆಗ ಸ್ಥಳಕ್ಕೆ ಭೇಟಿ
ನೀಡಿದ ತಹಶೀಲ್ದಾರ್ ಸಿದರಾಯ ಭೋಸಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಾತ್ಕಾಲಿಕ ವಾಗಿ ಸೇತುವೆದುರಸ್ತಿಗೊಳಿಸಿದ್ದರು.

ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದಾದ ನಂತರ ಹತ್ತಾರು ಬಾರಿ ಮಳೆಗೆ ಸೇತುವೆ ಕೊಚ್ಚಿಹೋಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಶ್ವತವಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಂಡಿಲ್ಲ.

ಶಾಸಕ ಡಾ. ಅಜಯಸಿಂಗ್ ಅವರು ಕೊಚ್ಚಿಹೋದ ಸೇತುವೆ ದುರಸ್ತಿಗೊಳಿಸಲು ಮುತುವರ್ಜಿ ವಹಿಸಬೇಕು ಎಂಬುದು ಬಡಾವಣೆ ನಾಗರಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.