ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಜಿಲ್ಲೆಯ ಎಲ್ಲಾ ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿ ಮತ್ತು ಯುವಜನರು, ಶಿಕ್ಷಕರು, ಪಾಲಕರು, ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಗುಲಬರ್ಗಾ ವಿಶ್ವವಿದ್ಯಾಲಯ ಉಳಿಸಲು ಜನಾಂದೋಲ ರೂಪಿಸುತ್ತೇವೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ (ಎಐಎಸ್ಇಸಿ) ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಎಸ್. ಇಬ್ರಾಹಿಂಪುರ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಗಳಿಂದಾಗಿ ಗುಲಬರ್ಗಾ ವಿವಿ ಅಧೋಗತಿ ತಲುಪಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯೂ ಕುಸಿತವಾಗಿದೆ. ಸರ್ಕಾರ ಸಹ ಮೂಲಸೌಕರ್ಯ ನೀಡದೆ, ಬೋಧಕರನ್ನು ನೇಮಕಾತಿ ಮಾಡದೆ ನಿಷ್ಕಾಳಜಿ ತೋರಿಸುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳಿಗೆ ಮುಕ್ತ ಅವಕಾಶ ನೀಡುತ್ತಿರುವುದರಿಂದ ಜ್ಞಾನಗಂಗಾದಲ್ಲಿ ವಿದ್ಯಾರ್ಥಿಗಳ ಬರ ಎದುರಿಸುವಂತ್ತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ವಿಭಾಗವು ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಿ, ಅಂಕಪಟ್ಟಿಗಳನ್ನು ನೀಡುವಲ್ಲಿ ವಿಳಂಬ ಮಾಡುತ್ತಿದೆ. ಇದರಿಂದಲೂ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯದೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ನೂರಾರು ಎಕರೆ ಇಎಸ್‌ಐ ಆಸ್ಪತ್ರೆಯಂತಹ ಶಿಕ್ಷಣೇತರ ಚಟುವಟಿಕೆಗಳಿಗೆ ನೀಡಲಾಗಿದೆ. ಈಗ ಮತ್ತೆ ಹಲವು ಇಲಾಖೆಗಳು ಜಮೀನು ಕೊಡುವಂತೆ ಒತ್ತಾಯ ಮಾಡುತ್ತಿವೆ. ಯಾವುದೇ ಕಾರಣಕ್ಕೂ ವಿವಿಯ ಜಾಗವನ್ನು ಅನ್ಯ ಇಲಾಖೆಗಳಿಗೆ ಬಿಟ್ಟುಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ವಿವಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕು. ಪರೀಕ್ಷಾ ವಿಭಾಗವನ್ನು ಸುಧಾರಿಸಬೇಕು. ವಿದಾರ್ಥಿಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.