ADVERTISEMENT

‘ಆಯೋಗದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಿ’

ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:18 IST
Last Updated 27 ಮಾರ್ಚ್ 2024, 16:18 IST

ಕಲಬುರಗಿ: ‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಎಸ್‌ಎಸ್‌ಟಿ, ಎಫ್‌ಎಸ್‌ಟಿ, ವಿಎಸ್‌ಟಿ ತಂಡಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚುನಾವಣೆ ಸಮಿತಿಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಎಆರ್‌ಒಗಳು, ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ‘ವಿಶೇಷವಾಗಿ ಅಂತರ ರಾಜ್ಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ವಾಹನಗಳಲ್ಲಿ ಅಕ್ರಮವಾಗಿ ಹಣ, ವಸ್ತುಗಳನ್ನು ಸಾಗಿಸುತ್ತಿದ್ದಲ್ಲಿ ಜಪ್ತಿ ಮಾಡಬೇಕು’ ಎಂದರು.

‘ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡದೇ ಯಾವುದೇ ವಾಹನಗಳನ್ನು ಬಿಡಕೂಡದು. ₹50 ಸಾವಿರಕ್ಕಿಂತ ಹೆಚ್ಚು ಹಣ ಇದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಾತನಾಡಿ, ‘ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ರಜಿಸ್ಟರ್‌ ನಿರ್ವಹಿಸಬೇಕು. ಕಡ್ಡಾಯವಾಗಿ ವಿಡಿಯೊ ಮಾಡಬೇಕು. ಒಂದು ವೇಳೆ ಕ್ಯಾಮೆರಾ ಇಲ್ಲದಿದ್ದರೆ ಮೊಬೈಲ್‍ನಿಂದ ವಿಡಿಯೊ ಮಾಡಬೇಕು. ಪ್ರತಿಯೊಂದಕ್ಕೊ ವಿಡಿಯೊ ಡಾಕ್ಯುಮೆಂಟ್ ಆಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್ ಮೀನಾ ಮಾತನಾಡಿ, ‘ರಾಜಕೀಯ ಪಕ್ಷದ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಡಿಜಿಟಲ್ ಪ್ರಚಾರ ಹೆಚ್ಚು ಮಾಡುತ್ತಿರುತ್ತಾರೆ. ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ನಿಗಾವಹಿಸಿ’ ಎಂದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್‌ ಪಾಟೀಲ, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.