ವಂಚನೆ
ಕಲಬುರಗಿ: ನಗರದ ಶೇಖರೋಜಾದಲ್ಲಿರುವ ತುಳಜಾಭವಾನಿ ಪೆಟ್ರೋಲಿಯಂ ಪಂಪ್‌ನ ಮಾಲೀಕ ಕಿರಣ ಶ್ರೀಮಂತ ಇಲ್ಲಾಳ ಅವರಿಗೆ ₹2.09 ಕೋಟಿ ವಂಚಿಸಿರುವ ಕುರಿತು ಚೌಕ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
‘ಪೆಟ್ರೋಲ್ ಪಂಪ್ ಮ್ಯಾನೇಜರ್ ನವೀನ ಮೋಹನರೆಡ್ಡಿ ಮತ್ತು ಅಕೌಂಟೆಂಟ್ ರಾಘವೇಂದ್ರ ಮೋಹನರೆಡ್ಡಿ ಸಹೋದರರು ₹2,09,86,572 ಸ್ವಂತಕ್ಕೆ ಬಳಸಿಕೊಂಡು, ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಕಿರಣ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ತಂದೆ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ಅವರ ಮೇಲೆ 2022ರಲ್ಲಿ ಮಾರಣಾಂತಿಕ ಹಲ್ಲೆಯಾಗಿದ್ದರಿಂದ ಅವರಿಗೆ ಬೆಂಗಳೂರು ಮತ್ತು ಇತರೆಡೆ ಚಿಕಿತ್ಸೆ ಕೊಡಿಸಲು ನಿರತನಾಗಿದ್ದೆ. ಈ ಸಂದರ್ಭದಲ್ಲಿ ಮ್ಯಾನೇಜರ್ ನವೀನ ಅವರಿಗೆ ಪೆಟ್ರೋಲ್ ಪಂಪ್‌ನ ಎಲ್ಲ ಹಣಕಾಸಿನ ವ್ಯವಹಾರ ನೋಡಿಕೊಳ್ಳುವಂತೆ ತಿಳಿಸಲಾಗಿತ್ತು. 2024ರಲ್ಲಿ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಿಸಿದಾಗ ಪೆಟ್ರೋಲ್ ಪಂಪ್ ವ್ಯವಹಾರ ಪರಿಶೀಲಿಸಿದಾಗ ಇಂಧನ ಮಾರಾಟದ ಹಣ ಮತ್ತು ಪಂಪ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನ ಬಿಟ್ಟು ಕೊಡುವುದಾಗಿ ಹೇಳಿದ್ದರಿಂದ ಕಾದು ನೋಡಲಾಗಿತ್ತು. ಇಬ್ಬರೂ ಈಗ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾನೂನು ಕ್ರಮ ಜರುಗಿಸಿ’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.