ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಪಿಎಚ್‌.ಡಿ ವಿದ್ಯಾರ್ಥಿಗಳಿಂದಲೂ ಮೌಲ್ಯಮಾಪನ

ಮಲ್ಲಿಕಾರ್ಜುನ ನಾಲವಾರ
Published 18 ಆಗಸ್ಟ್ 2022, 6:21 IST
Last Updated 18 ಆಗಸ್ಟ್ 2022, 6:21 IST
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗವು ಇತಿಹಾಸದ ಮೂರನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳಿಗೂ ಪಿಎಚ್‌.ಡಿ ವಿದ್ಯಾರ್ಥಿಗಳಿಂದ ಮೌಲ್ಯಮಾಪನ ಮಾಡಲಾಗಿದೆ.

ಅರ್ಥಶಾಸ್ತ್ರದ ಮೂರನೇ ಸೆಮಿಸ್ಟರ್‌ನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಮೂವರು ನಕಲಿ ಉಪನ್ಯಾಸಕರನ್ನು ನೇಮಿಸಿಕೊಂಡ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಮೌಲ್ಯಮಾಪನಕ್ಕೆ ಅನರ್ಹ ಉಪನ್ಯಾಸಕರ ನೇಮಕ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಟವಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮೌಲ್ಯಮಾಪನಕ್ಕೆ ಆ ಮೂವರನ್ನು ತಡೆದು, ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಹೊರಬಂದಿದೆ.

ADVERTISEMENT

‘ಪಿಎಚ್‌.ಡಿ ವಿದ್ಯಾರ್ಥಿಗಳು ಮತ್ತು ಸ್ನಾತಕೊತ್ತರ ವಿಭಾಗದಲ್ಲಿನ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಇಲ್ಲ’ ಎಂದು ವಿಶ್ವವಿದ್ಯಾಲಯ ಈಚೆಗೆ ಸುತ್ತೋಲೆ ಹೊರಡಿಸಿತ್ತು. ಈ ನಿಯಮ ಉಲ್ಲಂಘಿಸಿ ಇತಿಹಾಸ ವಿಭಾಗದ ಮೂವರು ಪಿಎಚ್‌.ಡಿ ವಿದ್ಯಾರ್ಥಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿದೆ. ‘ಬಿಳಿ ಹಾಳೆಯ ಮೇಲೆ ಬೋಧನೆ ಮಾಡಿದ ಅನುಭವದ ಪತ್ರವನ್ನು ಸಲ್ಲಿಸಿ, ಕೆಲವರು ವಾಮಮಾರ್ಗದಿಂದ ಮೌಲ್ಯಮಾಪನದ ಅವಕಾಶ ಪಡೆದಿದ್ದಾರೆ. ನಿತ್ಯ ಎರಡು ಉತ್ತರ ಪತ್ರಿಕೆಯ 40 ಸ್ಕ್ರಿಪ್ಟ್ ಮೌಲ್ಯಮಾಪನಕ್ಕೆ ₹600, ದಿನದ ಭತ್ಯೆ 1,100 ಸೇರಿ ಒಟ್ಟು ₹1700 ಗೌರವ ಧನ ಪಡೆಯುತ್ತಾರೆ’ ಎಂದು ಉಪನ್ಯಾಸಕರು ದೂರಿದರು.

‘ಕೆಲ ಪಿಎಚ್‌.ಡಿ ವಿದ್ಯಾರ್ಥಿಗಳು ಮತ್ತು ಅನರ್ಹ ಉಪನ್ಯಾಸಕರು ಖಾಸಗಿ ಕಾಲೇಜುಗಳಿಗೆ ಹಣ ಕೊಟ್ಟು ಅನುಭವ ಪತ್ರ ‍ಪಡೆದು, ಮೌಲ್ಯಮಾ
ಪಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಅವರು ಸಲ್ಲಿಸಿದ ಅರ್ಜಿಗಳನ್ನು ಪರಾಮರ್ಶಿಸಿ, ತನಿಖೆಗೆ ಒಳಪಡಿಸಬೇಕು. ತಪ್ಪಿಸ್ಥರಿಗೆ ಬೋಧನೆಗೆ ಅವಕಾಶ ಕೊಡಬಾರದು’ ಎಂದು ಅವರು ತಿಳಿಸಿದರು.

‘ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅನುಭವದ ಆಧಾರದ ಮೇಲೆ ದಶರಥ ಅವರನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿತ್ತು.ಪಿಎಚ್‌.ಡಿ ವಿದ್ಯಾರ್ಥಿ ಎಂಬುದು ಬಳಿಕ ತಿಳಿದುಬಂದಿದೆ. ತಕ್ಷಣವೇ ಅವರನ್ನು ಮೌಲ್ಯಮಾಪನ
ದಿಂದ ಅಮಾನತು ಮಾಡಲಾಗಿದೆ. ಇನ್ನೊಬ್ಬ ಪಿಎಚ್‌ಡಿ ವಿದ್ಯಾರ್ಥಿ ನಿಂಗಪ್ಪ ಅವರನ್ನು ಮೊದಲ ದಿನವೇ ವಾಪಸ್ ಕಳುಹಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್‌.ಕಟ್ಟಿ ‘ಪ್ರಜಾವಾಣಿ’ಗೆತಿಳಿಸಿದರು.

‘ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ’

‘ಅರ್ಹತೆ ಇಲ್ಲದಿದ್ದರೂ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಮೂವರನ್ನು ವಿಚಾರಣೆಗೆ ಕರೆಯಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಒಂದೇ ದಿನ ಅವರು ಮೌಲ್ಯಮಾಪನ ಮಾಡಿದ್ದು, ಆ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಲಾಗುವುದು’ ’ ಎಂದು ಡಾ. ಮೇಧಾವಿನಿ ಎಸ್.ಕಟ್ಟಿ ತಿಳಿಸಿದರು.

‘ಮೌಲ್ಯಮಾಪಕರಿಗೆ ಸಂಬಂಧಿಸಿದಂತೆ ಅಫಜಲಪುರದ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಜತೆ ಚರ್ಚಿಸಿರುವೆ. ಮೌಲ್ಯಮಾಪನ ಮಾಡಿದ ಮೂವರು ಉಪನ್ಯಾಸಕರು ಆ ಕಾಲೇಜಿನಲ್ಲಿ ಬೋಧಿಸಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಅವರು ತಿಳಿಸಿದರು.

‘ಅನುಮತಿ ನೀಡಿದ ಕಾಲೇಜುಗಳಿಗೆ ಕಾರಣ ಕೇಳಿ ಪತ್ರ ಬರೆಯಲಾಗುವುದು. ನಿಯಮಬಾಹಿರವಾಗಿ ಮೌಲ್ಯಮಾಪನಕ್ಕೆ ಸೇರ್ಪಡೆಯಾದ ಪಿಎಚ್‌.ಡಿ ವಿದ್ಯಾರ್ಥಿಗಳನ್ನು ವಿಭಾಗದಿಂದ ಅಮಾನತು ಮಾಡುವಂತೆ ಸೂಚಿಸಲಾಗುವುದು. ಹಣ ಪಡೆದು ಅನುಮತಿ ಕೊಡಲಾಗಿದೆ ಎಂಬುದು ಸುಳ್ಳು’ ಎಂದು ಅವರು ತಿಳಿಸಿದರು.

*ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ಮಾಡಲು ಅವಕಾಶ ಇಲ್ಲ. ನಮ್ಮ ವಿಭಾಗದ ವಿದ್ಯಾರ್ಥಿಗಳು ಆಯ್ಕೆ ಆಗಿದ್ದರ ಬಗ್ಗೆ ತಿಳಿದುಬಂದಿಲ್ಲ. ಈ ಕುರಿತು ಮಾಹಿತಿ ಪಡೆಯಲಾಗುವುದು
ಡಾ.ಮಂಜುಳಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.