ADVERTISEMENT

ಕಾರ್ಯಕರ್ತರ ಸೇವೆ ಕಾಯಂಗೆ ಒತ್ತಾಯ

ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:24 IST
Last Updated 9 ಆಗಸ್ಟ್ 2022, 4:24 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಸೋಮವಾರ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಸೋಮವಾರ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರಗಿ: ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ರಾಷ್ಟ್ರೀಯ ವಿಕಲಚೇತನರ ಪುನರ್ವಸತಿ ಯೋಜನೆ ಅಡಿ 2007ರಲ್ಲಿ 6500ಕ್ಕಿಂತ ಹೆಚ್ಚು ಅಂಗವಿಕಲರು ಗೌರವಧನದ ಆಧಾರದ ನೇಮಕಾತಿಯಡಿ ಸೇವೆ ಸಲ್ಲಿಸುತ್ತಿದ್ದು, ಸೇವೆಯನ್ನು ಕಾಯಂ ಮಾಡಬೇಕು ಎಂದು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಮಾಸಿಕ ವಿಆರ್‌ಡಬ್ಲುಗಳಿಗೆ ₹ 750, ಎಂಆರ್‌ಡಬ್ಲುಗಳಿಗೆ ₹ 1500 ಗೌರವಧನವಿತ್ತು. ಅದನ್ನು ಈಗ ಕ್ರಮವಾಗಿ ₹ 6 ಸಾವಿರ ಹಾಗೂ ₹ 12 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈಗ ಹಗಲು ರಾತ್ರಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಆದರೂ, ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಕೆಲಸದಿಂದ ತೆಗೆದು ಹಾಕುವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೇ ನಂಬಿಕೊಂಡಿದ್ದರಿಂದ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿಲ್ಲ. ವಯೋಮಿತಿ ಮೀರುತ್ತಿರುವುದರಿಂದ ಅವಕಾಶವಿಲ್ಲದೇ ಕಂಗಾಲಾಗಿದ್ದು, 15 ವರ್ಷದ ಸೇವೆಯನ್ನು ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹೊಟ್ಟೆಪಾಡಿಗಾಗಿ ಹುಟ್ಟಿಕೊಂಡಿರುವ ಎನ್‌ಜಿಒಗಳ ಖಾಸಗಿ ಕೆಲಸ, ಕಾರ್ಯಗಳನ್ನು ರಾಜ್ಯದ ವಿಆರ್‌ಡಬ್ಲು, ಎಂಆರ್‌ಡಬ್ಲುಗಳ ಮೂಲಕ ಮಾಡಿಸಬಾರದು. ಕೇವಲ ಸರ್ಕಾರ ಮತ್ತು ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಬೇಕು. ಯುಆರ್‌ಡಬ್ಲುಗಳಿಗೆ ಪಾಲಿಕೆಯಿಂದ ಶೇ 5ರ ಅನುದಾನದಲ್ಲಿ ಕಂಪ್ಯೂಟರ್ ಕೊಡಿಸಬೇಕು. ಕಾಯಂ ಆಗಿ ಕುಳಿತು ಕೆಲಸ ಮಾಡಲು ಟೇಬಲ್‌, ಕುರ್ಚಿ ಹಾಗೂ ಕೊಠಡಿ ವ್ಯವಸ್ಥೆ ಮಾಡಬೇಕು. ಅಂಗವಿಕಲರ ಪರವಾಗಿ ಸಾಮಾಜಿಕ ಸೇವೆ ಸಲ್ಲಿಸುವ ರಾಜ್ಯದ ಯಾವುದೇ ಎನ್‌ಜಿಒಗಳು ನೇರವಾಗಿ ಎಂಆರ್‌ಡಬ್ಲು, ಯುಆರ್‌ಡಬ್ಲು, ವಿಆರ್‌ಡಬ್ಲುಗಳಿಗೆ ರಾಜ್ಯದ ಅಂಗವಿಕಲರ ಮಾಹಿತಿ ಹಾಗೂ ದಾಖಲಾತಿಗಳನ್ನು ನೇರವಾಗಿ ಕೇಳಬಾರದು. ಇಲಾಖೆಯ ಮೂಲಕವೇ ಪಡೆದುಕೊಳ್ಳಬೇಕೆಂದು ಆದೇಶ ಹೊರಡಿಸಬೇಕು. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ಗೆ ಒಬ್ಬರಂತೆ ಯುಆರ್‌ಡಬ್ಲುಗಳನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ. ಮೇಟಿ, ರಾಜ್ಯ ಉಪಾಧ್ಯಕ್ಷ ವೆಂಕಟಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂಸಾಬ್ ಐ. ಡೊಂಗರಗಾಂವ, ಖಜಾಂಚಿ ರಾಜೇಂದ್ರ ಕಮಕನೂರ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣು ಎಸ್‌. ಹತ್ತರಕಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.