ADVERTISEMENT

‌ದೇಶದ ಪ್ರಗತಿಗೆ ಇಂಧನ ಮುಖ್ಯ; ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:06 IST
Last Updated 31 ಜುಲೈ 2022, 6:06 IST
ಕಲಬುರಗಿಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ ವೀಕ್ಷಿಸಿದ ರಾಜಕೀಯ ಮುಖಂಡರು, ಅಧಿಕಾರಿಗಳು
ಕಲಬುರಗಿಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ ವೀಕ್ಷಿಸಿದ ರಾಜಕೀಯ ಮುಖಂಡರು, ಅಧಿಕಾರಿಗಳು   

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ’ @ 2047 ವಿದ್ಯುತ್ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಇಂಧನ ಇಲಾಖೆಯ ವಿವಿಧ ರಾಜ್ಯಗಳ
ಆಯ್ದ 5 ಜಿಲ್ಲೆಗಳ ಫಲಾನುಭವಿ ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂವಾದ ನಡೆಸಿದರು.

ತೆಲಂಗಾಣ, ಕೇರಳ, ಲಡಾಖ್, ರಾಜಸ್ತಾನ್, ಗುಜರಾತ್ ರಾಜ್ಯಗಳಲ್ಲಿ ಎನ್‌ಟಿಪಿಸಿ ಶುದ್ಧ ವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರೀಯ ಸೌರ ಮೇಲ್ಛಾವಣಿ ವೆಬ್ ಪೋರ್ಟಲ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಮುಂದಿನ 25 ವರ್ಷಗಳಲ್ಲಿ ದೇಶದ ಪ್ರಗತಿಯನ್ನು ವೇಗಗೊಳಿಸುವಲ್ಲಿ ಇಂಧನ ಮತ್ತು ವಿದ್ಯುತ್ ಕ್ಷೇತ್ರಗಳು ದೊಡ್ಡ ಪಾತ್ರ ವಹಿಸಲಿವೆ. ವ್ಯವಹಾರ ಸುಲಭಗೊಳಿಸಲು ಈ ಕ್ಷೇತ್ರವನ್ನು ಬಲಪಡಿಸುವುದು ಈಗ ಮುಖ್ಯವಾಗಿದೆ’ ಎಂದರು.

ADVERTISEMENT

‘8 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 1.70 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಹೆಚ್ಚುವರಿಯಾಗಿ ವೃದ್ಧಿಯಾಗಿದೆ. ಇಡೀ ದೇಶವನ್ನು ಸಂಪರ್ಕಿಸಲು 1.70 ಲಕ್ಷ ಸರ್ಕ್ಯೂಟ್ ಕಿ.ಮೀ. ಟ್ರಾನ್ಸ್‌ಮಿಷನ್ ಲೈನ್‌ ಹಾಕಲಾಗಿದೆ’ ಎಂದರು.

‘ಜಗತ್ತಿನ ಅತಿ ದೊಡ್ಡ ಸೌರ ವಿದ್ಯುತ್ ಘಟಕಗಳು ಭಾರತದಲ್ಲಿವೆ. ತೆಲಂಗಾಣ ಮತ್ತು ಕೇರಳದಲ್ಲಿ ದೇಶದ ಮೊದಲ ಮತ್ತು ಎರಡನೇ ಅತಿದೊಡ್ಡ ತೇಲುವ ಸೌರ ಸ್ಥಾವರಗಳಿವೆ’ ಎಂದರು.

ಎನ್‌ಟಿಪಿಸಿ ಸಂಸ್ಥೆಯು ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಿತು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಎನ್‌ಟಿಪಿಸಿ ಜನರಲ್ ಮ್ಯಾನೇಜರ್ ಅಲೊಕೇಶ್ ಬ್ಯಾನರ್ಜಿ, ಡಿಜಿಎಂ ಆರ್. ವಿನೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.