ADVERTISEMENT

ಕಲಬುರಗಿ | ಕುಶಲಕರ್ಮಿಗಳ ಕಲೆ ಅನಾವರಣ

ವಿಶ್ವಕರ್ಮ ವಸ್ತು ಪ್ರದರ್ಶನ, ವ್ಯಾಪಾರ ಮೇಳ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:03 IST
Last Updated 30 ಜನವರಿ 2026, 6:03 IST
ಕಲಬುರಗಿಯ ಕನ್ನಡ ಭವನದಲ್ಲಿ ಗುರುವಾರ ನಡೆದ ಪಿ.ಎಂ.ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ಗೃಹ ಅಲಂಕಾರಿಕ ಕರಕುಶಲ ವೀಕ್ಷಿಸಿದರು               ಪ್ರಜಾವಾಣಿ ಚಿತ್ರ
ಕಲಬುರಗಿಯ ಕನ್ನಡ ಭವನದಲ್ಲಿ ಗುರುವಾರ ನಡೆದ ಪಿ.ಎಂ.ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ಗೃಹ ಅಲಂಕಾರಿಕ ಕರಕುಶಲ ವೀಕ್ಷಿಸಿದರು               ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನವು ಗುರುವಾರ ಕುಶಲಕರ್ಮಿಗಳ ಕಲೆ ಅನಾವರಣ ವೇದಿಕೆಯಾಗಿ ಹೊರಹೊಮ್ಮಿತು.

ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ವತಿಯಿಂದ ಗುರುವಾರದಿಂದ ಆರಂಭವಾದ ಮೂರು ದಿನಗಳ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳದಲ್ಲಿ ಕುಶಲಕರ್ಮಿಗಳ ವಿವಿಧ ಕರಕುಶಲ ವಸ್ತುಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದವು.

ಹುಬ್ಬಳ್ಳಿಯ ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (ಎಂಎಸ್ಎಂಇ) ವ್ಯಾಪ್ತಿಗೆ ಬರುವ 14 ಜಿಲ್ಲೆಗಳ ಕುಶಲಕರ್ಮಿಗಳ ಕೈಚಳಕದಲ್ಲಿ ನಿರ್ಮಾಣವಾದ ಸಾಮಗ್ರಿಗಳು ಸಾರ್ವಜನಿಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದವು.

ADVERTISEMENT

ಬಿದಿರು, ಜೇಡಿಮಣ್ಣು, ಮರ, ಲೋಹದ ಸಾಮಗ್ರಿಗಳು, ಕೈಮಗ್ಗದ ಖಾದಿ ಬಟ್ಟೆಗಳು, ಕಲಾತ್ಮಕ ಮೀನಿನ ಬಲೆಗಳು, ಮಹಿಳೆಯಿಂದ ಮಾಡಲ್ಪಡುವ ಮಣ್ಣಿನ ದೀಪಗಳು, ವಿವಿಧ ಅಲಂಕಾರಿಕ‌ ವಸ್ತುಗಳು, ಕೊಪ್ಪಳದ ಕಿನ್ನಾಳೆ ಗೊಂಬೆಗಳು, ಕೈಯಿಂದ ಕೆತ್ತನೆ ಮಾಡಿದ ಬಿದಿರಿನ ವಾಟರ್ ಬಾಟಲಿ, ಮರದ ಲ್ಯಾಂಪ್‌ ಸೇರಿದಂತೆ ಪ್ರತಿ ಸಾಮಗ್ರಿಗಳಲ್ಲೂ ಕೌಶಲದ ವಿಶೇಷ ಛಾಪು ಕಾಣುತ್ತಿತ್ತು.

ಮೇಳದಲ್ಲಿದ್ದ 50 ಮಳಿಗೆಗಳಲ್ಲಿ ಹೆಚ್ಚಿನ ಮಳಿಗೆಗಳು ಗೃಹ ಅಲಂಕಾರಿಕ ವಸ್ತುಗಳು, ಕೈಚೀಲಗಳು, ಕಲ್ಲು –ಕಟ್ಟಿಗೆಗಳಿಂದ ಕೆತ್ತನೆ ಮಾಡಿದ ಬಗೆಬಗೆಯ ವಿಗೃಹಗಳು, ಕಟ್ಟಿಗೆಯಿಂದ ತಯಾರಿಸಲಾದ ಗೃಹ ಬಳಕೆ ವಸ್ತುಗಳು, ನೀರಿನ ಬಾಟಲ್‌, ಆಭರಣಗಳು, ಮಣ್ಣಿನಿಂದ ತಯಾರಿಸಲಾದ ಮಡಿಕೆ, ಕುಡಿಕೆ, ಜೋಡೆತ್ತುಗಳು ಕಣ್ಮನ ಸೆಳೆದವು.

ಪೆನ್ಸಿಲ್, ಚಾಪಿನ್‌ನಲ್ಲಿಯೇ ಅವತರಿಸಿದ ನಂದಿ, ದೇವರ ಮೂರ್ತಿಗಳು ಬೆರಗು ಮೂಡಿಸುವಂತಿದ್ದವು. ಮುರಲ್‌ ಆರ್ಟ್‌ನಲ್ಲಿ ಸಿದ್ಧವಾದ ಮಹನೀಯರ ಭಾವಚಿತ್ರಗಳು, ಅಕ್ಕಸಾಲಿಗನ ಆಭರಣಗಳು, ಸಾಂಪ್ರದಾಯಕ ಉಡುಪುಗಳ ಮಳೆಗೆಗಳು ಕೈಬೀಸಿ ಕರೆಯುತ್ತಿದೆ.

‘ಕುಶಲರ್ಮಿಗಳಿಗೆ ಪ್ರೋತ್ಸಾಹ ಅಗತ್ಯ’ 

ಕಲಬುರಗಿ: ‘ವಿಶ್ವಕರ್ಮ ಯೋಜನೆಯ ಫಲಾನುಭವಿಗಳ ಕೌಶಲ ಪ್ರೋತ್ಸಾಹಿಸುವ. ಮಾರುಕಟ್ಟೆಯಲ್ಲಿ ವೇದಿಕೆ ಕಲ್ಪಿಸುವ ಉದ್ದೇಶದಿಂದ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೇಳಿದರು. ನಗರದ ಕನ್ನಡ ಭವನದಲ್ಲಿ ಗುರುವಾರ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು ‘ಜ.31ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಮೇಳವು ಕುಶಲಕರ್ಮಿಗಳಿಗೆ ಉದ್ಯಮದಲ್ಲಿ ಅಭಿರುಚಿ ಹೆಚ್ಚಿಸುವ ಕೆಲಸ ಮಾಡಬೇಕು’ ಎಂದರು. ಹುಬ್ಬಳ್ಳಿ ಎಂಎಸ್‍ಎಂಇ ಜಂಟಿ ನಿರ್ದೇಶಕ ಶಶಿಕುಮಾರ ಎಂ. ಎಂಎಸ್‍ಎಂಇ-ಡಿಎಫ್‍ಒ ಉಪನಿರ್ದೇಶಕ ಬಿ.ಎಸ್. ಜವಳಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್‌ ಅಜಿಂ ಲೀಡ್‌ ಬ್ಯಾಂಕ್‌ನ ಗೌರವ ಗುಪ್ತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.