ಪ್ರಾತಿನಿಧಿಕ ಚಿತ್ರ
ಕಲಬುರಗಿ: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿದ್ದರಿಂದ ತಾಲ್ಲೂಕಿನ ಪಾಳಾ ಗ್ರಾಮದ ಅನಿಲ್ ಭೀಮರಾಯ ಮೇಲಿನಕೇರಿ ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು 20 ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸಂತ್ರಸ್ತ ಬಾಲಕಿಯ ಪೋಷಕರು ಮಗಳಿಗೆ ಚುಡಾಯಿಸದಂತೆ ತಿಳಿ ಹೇಳಿದ್ದರೂ ಅನಿಲ್ ತನ್ನ ಚಾಳಿ ಬಿಟ್ಟಿರಲಿಲ್ಲ. ಆತನ ಪೋಷಕರೂ ಮಗನಿಗೆ ಬುದ್ಧಿ ಹೇಳಿರಲಿಲ್ಲ. 2022ರ ಫೆಬ್ರುವರಿ 10ರಂದು ಬಾಲಕಿಯನ್ನು ತನ್ನ ಮನೆಯ ಹಿತ್ತಲಿಗೆ ಕರೆಸಿಕೊಂಡ ಅಪರಾಧಿ ಬಾಲಕಿಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದ. ಹೀಗೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ. ಈ ಕುರಿತು ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ತೇಲಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯ–ಎಫ್‌ಟಿಎಸ್ಸಿ–1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ತೀರ್ಪು ಪ್ರಕಟವಾದ ತಿಂಗಳೊಳಗಾಗಿ ₹ 7 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.