ADVERTISEMENT

ಲೈಂಗಿಕ ದೌರ್ಜನ್ಯ: ಇಬ್ಬರಿಗೆ 20 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:15 IST
Last Updated 22 ಫೆಬ್ರುವರಿ 2026, 0:15 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಕಲಬುರಗಿ: ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಅಪರಾಧಿಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌(ವಿಶೇಷ ಪೋಕ್ಸೊ) ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

ಮಹಾಗಾಂವ ಠಾಣೆ ವ್ಯಾಪ್ತಿ: ಈ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 17 ವರ್ಷ 10 ತಿಂಗಳ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗ್ರಾಮವೊಂದರ ಸತೀಶ ಬಾಬುರಾವ ವಡ್ಡರ(21)ನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ₹1,60,500 ದಂಡ ವಿಧಿಸಲಾಗಿದೆ.

ADVERTISEMENT

ಅಪರಾಧಿ 2024ರ ಮಾರ್ಚ್ 15ರಂದು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಮೇ ತಿಂಗಳಲ್ಲಿ ಪುಣೆಗೆ ಕರೆದುಕೊಂಡು ಹೋಗಿ, ಅಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಮಹಾಗಾಂವ ಠಾಣೆ ತನಿಖಾಧಿಕಾರಿ ವಿ.ನಾರಾಯಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌(ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜೆ. ಅವರು ಅಪರಾಧಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸಂತ್ರಸ್ತೆಗೆ ₹2.50 ಲಕ್ಷ ಪರಿಹಾರವಾಗಿ ಕಾನೂನು ಪ್ರಾಧಿಕಾರದಿಂದ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು. ಪೊಲೀಸ್‌ ಸಿಬ್ಬಂದಿ ಬಾದಶಾಹ, ಪ್ರಶಾಂತ, ಅಭಿಲಾಷಾ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಮುಧೋಳ ಠಾಣೆ ವ್ಯಾಪ್ತಿ: ಈ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗ್ರಾಮವೊಂದರ ದೇವರಾಜ ತಿಮ್ಮಪ್ಪ ವಡ್ಡರ(20)ನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ₹1.50 ಲಕ್ಷ ದಂಡ ವಿಧಿಸಲಾಗಿದೆ.

2025ರ ಏಪ್ರಿಲ್‌ನಲ್ಲಿ ಅಪ್ರಾಪ್ತೆಯನ್ನು ಮನೆಯಿಂದ ಅಪಹರಣ ಮಾಡಿದ ಅಪರಾಧಿ, ಜಮೀನೊಂದರಲ್ಲಿ ಮತ್ತು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಮುಧೋಳ ಠಾಣೆಯ ತನಿಖಾಧಿಕಾರಿ ದೌಲತ್ ಎನ್.ಕೆ., ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜೆ. ಅವರು ಅಪರಾಧಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸಂತ್ರಸ್ತೆಗೆ ₹3 ಲಕ್ಷ ಪರಿಹಾರವಾಗಿ ಕಾನೂನು ಪ್ರಾಧಿಕಾರದಿಂದ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು. ಪೊಲೀಸ್‌ ಸಿಬ್ಬಂದಿ ಚಂದ್ರಕಾಂತ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.