ಕಾನ್‌ಸ್ಟೆಬಲ್ ಹುದ್ದೆಗಳ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳ ಪರಿಶೀಲನೆ ನಡೆಸುತ್ತಿರುವುದು
ಕಲಬುರಗಿ: ರಾಜ್ಯದಾದ್ಯಂತ ಖಾಲಿ ಇರುವ 3,064 ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಭಾನುವಾರ ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಅರ್ಧಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.
ಜಿಲ್ಲೆಯಲ್ಲಿ ಸುಮಾರು 3,400 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ ಸುಮಾರು 1,900 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಕಳೆದ 3–4 ತಿಂಗಳ ಅವಧಿಯಲ್ಲಿ ಹಲವು ನೇಮಕಾತಿ ಪರೀಕ್ಷೆಗಳು ನಡೆದಿವೆ. ಮೂರ್ನಾಲ್ಕು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದವರ ಪೈಕಿ ಒಂದಿಷ್ಟು ಅಭ್ಯರ್ಥಿಗಳು ಪರೀಕ್ಷೆಯಿಂದ ಹಿಂದಕ್ಕೆ ಸರಿದಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 28ರಂದು ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿ ಅಭ್ಯರ್ಥಿಗಳು ಬಂಧಿತರಾದ ಪ್ರಕರಣದ ಬಳಿಕ ನೇಮಕಾತಿ ಪರೀಕ್ಷೆಗೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಭಾನುವಾರದ ಪರೀಕ್ಷೆಗೂ ಸಾಕಷ್ಟು ಮುನ್ನಚ್ಚರಿಕೆ ತೆಗೆದುಕೊಂಡು, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ನಗರದ ಶಹಾಬಜಾರ್‌ನ ಆರಾಧನ ಹಿರಿಯ ಪ್ರಾಥಮಿಕ ಶಾಲೆ, ಇಸ್ಲಮಾಬಾದ್‌ನ ಗುಡ್ ಶೆಫರ್ಡ್ ಪ್ರೌಢಶಾಲೆ, ಆದರ್ಶ ನಗರದ ಸರ್ಕಾರಿ ಪಿಯು ಕಾಲೇಜು, ಗುಲಬರ್ಗಾ ವಿ.ವಿ.ಯ ಭಾಷಾ ವಿಭಾಗ, ಕನ್ನಡ ಅಧ್ಯಯನ ಸಂಸ್ಥೆ, ಶರಣ ನಗರದ ಮಹಾದೇವಿ ಬಾಲಕಿಯರ ಪ್ರೌಢಶಾಲೆ, ಸರ್ವಜ್ಞ ಸ್ವತಂತ್ರ ಪಿಯು ಕಾಲೇಜು, ಇಂದಿರಾ ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆ, ಸ್ವಾಮಿ ನಾರಾಯಣ ಗುರುಕುಲ ಶಾಲೆ, ಖಾಜಾ ಕಾಲೊನಿಯ ಟೀನಿ ಪರ್ಲ್ಸ್ ಶಾಲೆ ಮತ್ತು ವಿ.ಜಿ. ಮಹಿಳಾ ಕಾಲೇಜಿನಲ್ಲಿ ಪರೀಕ್ಷೆ ನಡೆದವು.
ಪರೀಕ್ಷೆ ಶುರುವಾಗುವ ಒಂದು ಗಂಟೆ ಮುನ್ನ ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳ ಹಾಲ್ ಟಿಕೆಟ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದ ನಂತರ ಲೋಹ ಶೋಧಕಗಳ (ಮೆಟಲ್‌ಡಿಟೆಕ್ಟರ್) ಮೂಲಕ ಅವರನ್ನು ಶೋಧಿಸಿದರು. ಅವರು ತಂದಿದ್ದ ಬ್ಯಾಗ್‌ಗಳನ್ನು ಪರೀಕ್ಷಾ ಕೊಠಡಿಯಿಂದ 200 ಮೀಟರ್ ದೂರದಲ್ಲಿ ಇರಿಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಯಿತು.
ಉದ್ದ ತೋಳಿನ ಅಂಗಿ, ಹೆಚ್ಚು ಜೇಬುಗಳಿರುವ ಪ್ಯಾಂಟ್, ಅಂಗಿ ಧರಿಸಲು ನಿಷೇಧಿಸಲಾಗಿತ್ತು. ಚಪ್ಪಲಿ, ಶೂಗಳನ್ನು ಧರಿಸಿ ಕೂರಲು ಅನುಮತಿಸಲಿಲ್ಲ. ಪರೀಕ್ಷಾ ಸಮಯದಲ್ಲಿ ಅನಧಿಕೃತವಾಗಿ ಯಾವುದೇ ಖಾಸಗಿ ವ್ಯಕ್ತಿಗಳನ್ನು ಕೇಂದ್ರದ ಒಳಪ್ರವೇಶಕ್ಕೆ ನಿರ್ಬಂಧಿಸಲು ಬಿಗಿ ಪೊಲೀಸ್ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.