
ಕಲಬುರಗಿ: ನವೆಂಬರ್ 6 ಮತ್ತು 7ರಂದು ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–2025 ನಡೆಯಲಿದ್ದು, ಇದಕ್ಕೆ ನಗರದ ಪೊಲೀಸ್ ಕವಾಯತು ಮೈದಾನ ಸಿದ್ಧಗೊಂಡಿದೆ.
ಈ ಕೂಟದಲ್ಲಿ ಕಲಬುರಗಿ ಗ್ರಾಮೀಣ, ಕಲಬುರಗಿ ನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಂದ ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಹಿಡಿದು ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 140ಕ್ಕೂ ಹೆಚ್ಚು ಜನ ಪರಿಣಿತ ಸಿಬ್ಬಂದಿ ಹಾಗೂ ವಿವಿಧ ಸ್ಥರಗಳಲ್ಲಿ ತರಬೇತಿ ಪಡೆದ 11 ಶ್ವಾನಗಳು ಭಾಗವಹಿಸಲಿವೆ.
ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ತನಿಖೆಯಲ್ಲಿ ವೈಜ್ಞಾನಿಕ ಪರಿಕರಗಳ ಬಳಕೆ, ಪೊಲೀಸ್ ಛಾಯಾಚಿತ್ರ, ಪೊಲೀಸ್ ವಿಡಿಯೊ ಚಿತ್ರೀಕರಣ, ಕಳ್ಳಸಾಗಣೆ ವಿರೋಧಿ ಪರಿಶೀಲನಾ ಕಾರ್ಯಕ್ರಮ, ಪೊಲೀಸ್ ಶ್ವಾನಗಳಿಗೆ ವಿವಿಧ ಬಗೆಯ ಸ್ಪರ್ಧೆಗಳು, ಅಪರಾಧ ಕಾನೂನು, ದೂರು ದಾಖಲು, ವಿಧಿವಿಜ್ಞಾನ, ಬೆರಳಚ್ಚು, ಶ್ವಾನದಳ ಬಳಕೆ, ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ, ಕಂಪ್ಯೂಟರ್ ಕೌಶಲದ ಪರೀಕ್ಷೆಗಳು ನಡೆಯಲಿವೆ.
ಶ್ವಾನಗಳಿಗೆ ವಿವಿಧ ಸ್ಪರ್ಧೆ: 16 ತಿಂಗಳು ಮೇಲ್ಪಟ್ಟ ಶ್ವಾನಗಳಿಗೆ ಕೂಟದಲ್ಲಿ ಭಾಗಿವಹಿಸುವ ಅವಕಾಶವಿದ್ದು, ಈ ಕೂಟದಲ್ಲಿ ಕಲಬುರಗಿಯಿಂದ ಜಿಮ್ಮಿ, ಡಾಲಿ, ರೂಬಿ, ರಿಂಕಿ, ರಾಣಿ ಎಂಬ ಶ್ವಾನಗಳು ಭಾಗವಹಿಸಲಿವೆ. ಸ್ಪೋಟಕ ವಸ್ತುಗಳ ಪತ್ತೆ, ಮಾದಕ ವಸ್ತುಗಳ ತಪಾಸಣೆ, ಕಳ್ಳತನ ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳನ್ನು ಭೇದಿಸುವ ಸ್ಪರ್ಧೆಗಳು ನಡೆಯಲಿವೆ. ಕರ್ತ್ಯವ್ಯಕೂಟದ ನಿರ್ಣಾಯಕರಾಗಿ 6 ಪರಿಣಿತ ತಂಡಗಳು ಅಧಿಕಾರಿಗಳೊಡನೆ ಆಗಮಿಸಿ ರಾಜ್ಯಮಟ್ಟಕ್ಕೆ ಆಯ್ಕೆಮಾಡುವರು’ ಎಂದು ಡಿಎಆರ್ ಡಿವೈಎಸ್‌ಪಿ ಶರಣಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನವೆಂಬರ್ 6ರಂದು ಬೆಳಿಗ್ಗೆ 10ಗಂಟೆಗೆ ಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಚಾಲನೆ ನೀಡಲಿದ್ದಾರೆ. 7ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಈಶಾನ್ಯ ವಲಯ ಐಜಿಪಿ ಶಾಂತನು ಸಿನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಕರ್ತವ್ಯಕೂಟವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಅಡಗಿರುವ ವೃತ್ತಿ ಕೌಶಲಗಳನ್ನು ಹೊರಹಾಕಲು ನೆರವಾಗಲಿದೆಶಾಂತನು ಸಿನ್ಹಾ ಈಶಾನ್ಯ ವಲಯ ಡಿಐಜಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.