ವಾಡಿ: ‘ಮನೆ ಮನೆಗೆ ಪೊಲೀಸ್ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಲು ಪೊಲೀಸರಿಗೆ ನೆರವಾಗಲಿದೆ. ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದರು.
ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ವಾಡಿ ಪೊಲೀಸ್ ಠಾಣೆಯಿಂದ ಮಂಗಳವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ’ ಎಂದರು.
‘ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಇಲಾಖೆ ಮುಂದಾಗಿದೆ. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ’ ಎಂದರು.
‘ಈ ಕಾರ್ಯಕ್ರಮದ ಮೂಲಕ ಕೆಲವು ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
ವಾಡಿ ಪಿಎಸ್ಐ ತಿರುಮಲೇಶ.ಕೆ ಮಾತನಾಡಿದರು. ಪೊಲೀಸ್ ಇಲಾಖೆ ಸಿಬ್ಬಂದಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.