ADVERTISEMENT

ಸೇಡಂ ಪುರಸಭೆ; ಬಿಜೆ‍ಪಿಯಲ್ಲೇ ಪೈಪೋಟಿ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಗಳಿಗೆ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:38 IST
Last Updated 6 ನವೆಂಬರ್ 2020, 16:38 IST
ಚೆನ್ನಮ್ಮ ಪಾಟೀಲ
ಚೆನ್ನಮ್ಮ ಪಾಟೀಲ   

ಸೇಡಂ: ಸ್ಥಳೀಯ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ‌ ಶನಿವಾರ (ನ. 7) ಚುನಾವಣೆ ನಡೆಯಲಿದೆ. ಸ್ಪಷ್ಟ ಬಹುಮತ ಪಡೆದ ಬಿಜೆಪಿ ಪಾಳಯದಲ್ಲಿ ಗದ್ದುಗೆ ಏರಲು ತೀವ್ರ ಪೈಪೋಟಿ ನಡೆದಿದೆ.

ಒಟ್ಟು 23 ಸದಸ್ಯ ಬಲವನ್ನು ಹೊಂದಿರುವ ಸೇಡಂ ಪುರಸಭೆಯಲ್ಲಿ ಬಿಜೆಪಿ– 13 ಸ್ಥಾನ, ಕಾಂಗ್ರೆಸ್-10 ಸ್ಥಾನಗಳನ್ನು ಹೊಂದಿದೆ. ಈ ಬಾರಿ ಅಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿಯೇ ಅಧ್ಯಕ್ಷ ಸ್ಥಾನದ ಗದ್ದುಗೆ ಏರಲು ತೀವ್ರ ಪೈಪೋಟಿ ನಡೆದಿದೆ.

ವಾರ್ಡ್ ನಂ. 12ರ ಚನ್ನಮ್ಮ ಪಾಟೀಲ, ವಾರ್ಡ್ ನಂ. 22ರ ಸಕ್ಕುಬಾಯಿ ರಾಮದಾಸ ಪವಾರ ಮತ್ತು ವಾರ್ಡ್ ನಂ. 23ರ ಶೋಭಾ ಹೂಗಾರ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಉಪಾಧ್ಯಕ್ಷ ಸ್ಥಾನವು ‘ಸಾಮಾನ್ಯ’ ಸ್ಥಾನಕ್ಕೆ ಮೀಸಲಾಗಿರುವುದರಿಂದ ವಾರ್ಡ್ ನಂ. 2 ರ ಶಿವಾನಂದ ಸ್ವಾಮಿ, ವಾರ್ಡ್ ನಂ. 16ರ ಚಂದ್ರಶೇಖರ ಕೆರೊಳ್ಳಿ ಮತ್ತು ವಾರ್ಡ್ ನಂ. 20ರ ಶ್ರೀನಿವಾಸ ಬಳ್ಳಾರಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ADVERTISEMENT

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸೇರಿದಂತೆ ಬಿಜೆಪಿ ಮುಖಂಡರ ನಿರ್ಧಾರಗಳ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂಕ್ಷಿಗಳ ಅಧೃಷ್ಟ ಖುಲಾಯಿಸಲಾಗಿದೆ.

‘ಚುನಾವಣೆ ಕಾಲಕ್ಕೆ ಮೊದಲು ಅಧ್ಯಕ್ಷ ಸ್ಥಾನಕ್ಕೆ ಕೈ ಎತ್ತುವ ಮೂಲಕ ಚುನಾವಣೆಯ ಪ್ರಕ್ರಿಯೆ ನಡೆಯಲಿದ್ದು, ಬಹುಮತ ಹೆಚ್ಚು ಪಡೆದ ಅಭ್ಯರ್ಥಿಯನ್ನು ಅಧ್ಯಕ್ಷರೆಂದು ಘೊಷಿಸಲಾಗುವುದು. ಇದೇ ನಿಯಮವು ಉಪಾಧ್ಯಕ್ಷ ಸ್ಥಾನಕ್ಕೆ ಅನ್ವಯವಾಗಲಿದೆ’ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.