ಕಲಬುರಗಿ: ‘ಸಂಘಟನೆ, ಮಿತ್ರತ್ವ, ಸಾಮಾಜಿಕ ಪ್ರಜ್ಞೆ ಹಾಗೂ ಪ್ರಗತಿ ಇವು ಮಾನವೀಯ ಜೀವನದ ಪರಿಪೂರ್ಣ ಅಂಶಗಳಾಗಿವೆ’ ಎಂದು ಪಂಢರಪುರದ ಪ್ರಭಾಕರ ಬೋಧಲೆ ಮಹಾರಾಜ ಅಭಿಪ್ರಾಯಪಟ್ಟರು.
ನಗರದ ಹೊಸ ಜೇವರ್ಗಿ ರಸ್ತೆಯ ಖಮಿತ್ಕರ್ ಭವನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಕಲಬುರಗಿ ದಕ್ಷಿಣ ವಿಭಾಗದಿಂದ ಭಾನುವಾರ ಹಮ್ಮಿಕೊಂಡಿದ್ದ ಭಾವಸಾರ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಿಯುಗದಲ್ಲಿ ಧನ, ಅಧಿಕಾರ, ವೈಯಕ್ತಿಕ ಬಲಕ್ಕಿಂತಲೂ ಸಂಘ ಶಕ್ತಿಯೇ ಮಹಾನ್. ಹೀಗಾಗಿ ಸಮಾಜ ಸಂಘಟನೆ ಇಂದಿನ ತುರ್ತು ಅಗತ್ಯವಾಗಿದೆ. ಸಮಾಜ ಸಂಘಟನೆಯಲ್ಲಿ ತೊಡಗಿದವರು ಹೊಟ್ಟೆಯನ್ನು ತುಸು ದೊಡ್ಡದಾಗಿ ಮಾಡಿಕೊಳ್ಳಬೇಕು. ಉಣ್ಣಲು ಅಲ್ಲ; ಸಂಘಟನೆ ವೇಳೆ ಎದುರಾಗುವ ಟೀಕೆ–ಟಿಪ್ಪಣಿ, ನಿಂದನೆ, ಆರೋಪಗಳನ್ನು ಹೊಟ್ಟೆಗೆ ಹಾಕಿಕೊಳ್ಳಲು’ ಎಂದು ಕಿವಿಮಾತು ಹೇಳಿದರು.
‘ನಮ್ಮೆಲ್ಲರ ಮೇಲೆ ಮಾತೃ, ಪಿತೃ, ಆಚಾರ್ಯ, ದೇವರು ಹಾಗೂ ಸಮಾಜದ ಋಣವಿದೆ. ಅದನ್ನು ಪ್ರಾಮಾಣಿಕವಾಗಿ ತೀರಿಸಲು ಪ್ರಯತ್ನಿಸಬೇಕು. ಭಾವಸಾರವು ಶ್ರೇಷ್ಠ ಭಾವ ಹೊಂದಿರುವ ಸಮಾಜ. ಮನುಜಕುಲದ ಮಾನ ಮುಚ್ಚುವ ಸಮಾಜ. ಜನರು ಇತ್ತೀಚೆಗೆ ಧರ್ಮಗಳನ್ನೇ ಮಾರೆಮಾಚುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಆಗಬಾರದು. ಸ್ವಧರ್ಮದ ಬಗೆಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಭಾವಸಾರ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ತಕ್ಕಮಟ್ಟಿಗೆ ಪ್ರಗತಿ ಸಾಧಿಸಿದೆ. ಆದರೆ, ಸಂಸ್ಕಾರ ಬಿಟ್ಟು ಹೋಗಿದೆ. ಶಿಕ್ಷಣ, ಹಣ ಬದುಕಿನ ಅಗತ್ಯವಾದರೆ, ಸಂಸ್ಕಾರವು ಬದುಕನ್ನು ಮೀರಿದ ಅಗತ್ಯವಾಗಿದೆ. ಹೀಗಾಗಿ ನಾವೆಲ್ಲರೂ ಜೀವನದಲ್ಲಿ ಆಧ್ಯಾತ್ಮಿಕ ಸಂಸ್ಕಾರಕ್ಕೆ ಒತ್ತು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರ ಲಿಖಿತ ಸಂದೇಶ ಓದಲಾಯಿತು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಭಾವಸಾರ ಸಮಾಜದ ಆದರ್ಶ ಮಾತೃ, ಆದರ್ಶ ಪಿತೃ ಹಾಗೂ ಆದರ್ಶ ದಂಪತಿಯನ್ನು ಗೌರವಿಸಲಾಯಿತು. ರಮೇಶ ಮಹೀಂದ್ರಕರ ಇಜೇರಿ ಬರೆದ ಕೃತಿ ಬಿಡುಗಡೆ ಮಾಡಲಾಯಿತು
ಭಾವಸಾರ ಕ್ಷತ್ರಿಯ ಸಮಾಜದ ಕಲಬುರಗಿ ದಕ್ಷಿಣ ವಿಭಾಗದ ಅಧ್ಯಕ್ಷ ನಂದಕುಮಾರ ಘಟನಾತೆ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರಕುಮಾರ ಲೋಖಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಕಿಶನ್ ರಂಗದಳ ಮಾತನಾಡಿದರು. ಲಕ್ಷ್ಮೀಕಾಂತ ರಂಗದಳ, ರಾಜೇಂದ್ರ ಕಟಾರೆ, ರಮೇಶ ನವಲೆ ವೇದಿಕೆಯಲ್ಲಿದ್ದರು. ಹರಿಪ್ರಿಯಾ ಘನಾತೆ ಪ್ರಾರ್ಥಿಸಿದರು. ಖಂಡಪ್ಪ ಟಿ. ಬಾಸುತ್ಕರ ನಿರೂಪಿಸಿದರು.
‘ಮಕ್ಕಳಿಗೆ ಬೇಕಿದೆ ಧರ್ಮಸಂಸ್ಕಾರ’
ಪೇರಣಾ ಭಾಷಣ ಮಾಡಿದ ಸೊಲ್ಲಾಪುರದ ಪ್ರಮೋದ ಚಿಂಚೋರೆ ‘ಮಕ್ಕಳಿಗೆ ನೈಜವಾದ ಧಾರ್ಮಿಕ ಸಂಸ್ಕಾರ ಹೇಳಿಕೊಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕ್ಷೀಣಿಸಿವೆ. ನಾವಿಬ್ಬರು ನಮ್ಮಗಿಬ್ಬರು ಎಂಬ ಪರಿಕಲ್ಪನೆ ನಾವಿಬ್ಬರು ನಮಗೊಬ್ಬರು ಎನ್ನುವಂತಾಗಿದೆ. ಮನೆಗಳು ದೊಡ್ಡದಾಗುತ್ತಿದ್ದು ಅಲ್ಲಿರುವ ನಾಲ್ಕು ಮಂದಿ ನಾಲ್ಕಾರು ಕೊಠಡಿಗಳಲ್ಲಿ ವಾಸಿಸುತ್ತಿದ್ದಾರೆ. ಪರಸ್ಪರರಿಗೆ ಸ್ಪಂದಿಸುವ ಬದಲು ಮೊಬೈಲ್ ಫೋನ್‌ಗಳಲ್ಲಿ ಮುಳಗಿರುತ್ತಾರೆ. ಅದು ಕುಟುಂಬ ವ್ಯವಸ್ಥೆಯೇ ಅಲ್ಲ ಬೇಕಿದ್ದರೆ ವಸತಿ ಗೃಹ ಲಾಡ್ಜ್ ಎನ್ನಬಹುದು’ ಎಂದು ವ್ಯಂಗ್ಯವಾಡಿದರು.
‘ದೇವರಿಗೆ ಹಾರ ಹಾಕಿ ಅಗರಬತ್ತಿ ಹಚ್ಚಿ ಆರತಿ ಬೆಳಗುವುದು ಧಾರ್ಮಿಕ ಸಂಸ್ಕಾರವಲ್ಲ ಅದೊಂದು ಪೂಜಾ ಪದ್ಧತಿಯಷ್ಟೆ. ನಮ್ಮ ಧರ್ಮ ಹೇಗೆ ಬಂತು ಪೂಜೆ ಆಚರಣೆ ಉತ್ಸವ ಸಂಪ್ರದಾಯ ರೀತಿ–ನೀತಿ ನೇಮ–ನಿಷ್ಠೆ ಇಂಥವುಗಳ ಬಗ್ಗೆ ವೈಜ್ಞಾನಿಕವಾಗಿ ಮಕ್ಕಳಿಗೆ ತಿಳಿಸುವುದು ಧಾರ್ಮಿಕ ಸಂಸ್ಕಾರವಾಗಿದೆ. ಇಂಥ ಸಂಸ್ಕಾರ ಪಡೆಯುವ ಮಕ್ಕಳು ಸಮಾಜದಲ್ಲಿ ದಾರಿ ತಪ್ಪದೇ ಮುನ್ನಡೆಯಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.