ADVERTISEMENT

ಶಹಾಪುರ: ಪ್ರಜಾಸೌಧ ನಿರ್ಮಾಣಕ್ಕೆ ಅನವಶ್ಯ ಗೊಂದಲ

4 ಎಕರೆ ಜಮೀನಿನಲ್ಲಿ ನಿರ್ಮಾಣದ ಗುರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:10 IST
Last Updated 16 ಡಿಸೆಂಬರ್ 2025, 7:10 IST
ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರೌಜಾಸೌಧ ಕಟ್ಟಡದ ಜಾಗ
ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರೌಜಾಸೌಧ ಕಟ್ಟಡದ ಜಾಗ   

ಶಹಾಪುರ: ಭೀಮರಾಯನಗುಡಿ-ಕಲಬುರಗಿ ನಡುವೆ ಹೆದ್ದಾರಿಗೆ ಹೊಂದಿಕೊಂಡಿರುವ ನಗರದ ಪ್ರಥಮ ದರ್ಜೆ ಕಾಲೇಜಿನ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ ನಾಲ್ಕು ಎಕರೆ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರಗೊಂಡಿದೆ. ಆದರೆ ಶಿಕ್ಷಣ ಇಲಾಖೆಯ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ಬೇಡ ಎಂದು ಕೆಲ ಸಂಘಟನೆಗಳು ಒತ್ತಾಯಪಡಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

ಸಾರ್ವಜನಿಕರ ಕೆಲಸ ಒಂದೇ ಸೂರಿನ ಅಡಿಯಲ್ಲಿ ಕಚೇರಿಗಳನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದ ಮುಂದಾಗಿದೆ. ಸಚಿವ ಸಂಪುಟ ನಿರ್ಣಯದಂತೆ ಪ್ರಜಾಸೌಧ ನಿರ್ಮಾಣಕ್ಕೆ ₹ 17ಕೋಟಿ ಮಂಜೂರು ಆಗಿದೆ. ಸರ್ಕಾರದ ನಿರ್ದೇಶನದಂತೆ ಸ್ವಚ್ಛತೆಯ ಕೆಲಸವನ್ನು ಆರಂಭಿಸಿದೆ ಎಂದು ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಮಾಹಿತಿ ನೀಡಿದರು.

‘ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ತೆಕ್ಕೆಯಲ್ಲಿ ಒಟ್ಟು 88 ಎಕರೆ ಜಮೀನು ಇದೆ. ಅದರಲ್ಲಿ ಮಾದರಿ ಸರ್ಕಾರಿ ಕಾಲೇಜಿಗೆ 10 ಎಕರೆ, ಆದರ್ಶ ವಿದ್ಯಾಲಯಕ್ಕೆ 4 ಎಕರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 17 ಎಕರೆ ಜಮೀನು ಇದೆ. ಇನ್ನೂ ಹೆಚ್ಚುವರಿಯಾಗಿ ಶಿಕ್ಷಣ ಇಲಾಖೆಗೆ 50 ಎಕರೆ ಜಮೀನು ಲಭ್ಯವಿದೆ. ಪ್ರಜಾಸೌಧ ನಿರ್ಮಾಣದಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕೆಲ ಸಂಘಟನೆಗಳು ತಮ್ಮ ಸ್ವಾರ್ಥಕ್ಕಾಗಿ ಕೀಳು ಮಟ್ಟದ ಪ್ರಚಾರಕ್ಕೆ ಇಳಿಯಬಾರದು. ಅಭಿವೃದ್ಧಿ ಕೆಲಸಕ್ಕೆ ರಾಜಕೀಯ ಲೇಪನ ಹಚ್ಚಬಾರದು. ಪ್ರಜಾಸೌಧ ನಿರ್ಮಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ ಎಂಬುವುದು ಹೋರಾಟ ಮಾಡುವರು ಅರಿತುಕೊಳ್ಳಬೇಕು’ ಎಂದು ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಸಲಹೆ ನೀಡಿದರು.

‘ಹಳೆ ತಹಶೀಲ್ದಾರ್‌ ಕಚೇರಿಯ ಜಾಗದಲ್ಲಿ ಈಗಾಗಲೇ ತಾಯಿ ಮಗು ಆಸ್ಪತ್ರೆ ನಿರ್ಮಾಣಕ್ಕೆ ₹ 20 ಕೋಟಿ ಅನುದಾನ ಬಂದಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಯನ್ನು ಉನ್ನತಿಕರಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿ ಒಬ್ಬರು.

ADVERTISEMENT

‘ರೈತ ಸಂಘಟನೆಯ ಹೆಸರಿನಲ್ಲಿ ಮುಖವಾಡ ಹೊತ್ತುಕೊಂಡು ಅಲೆಯುತ್ತಿರುವ ನಾಯಕರ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಪ್ರಜಾಸೌಧ ನಿರ್ಮಾಣದಿಂದ ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ತೆಗೆದುಕೊಂಡ ನಿರ್ಧಾರ ಜನಪರವಾಗಿದೆ. ಈಗಾಗಲೇ ನಿಗದಿಪಡಿಸಿದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿರುವಾಗ ಗೊಂದಲಕ್ಕೆ ತೆರೆ ಎಳೆಯಬೇಕಾದರೆ ತ್ವರಿತವಾಗಿ ಅಡಿಗಲ್ಲು ಹಾಕಿ ಕೆಲಸ ಆರಂಭಿಸಬೇಕು’ ಎಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕರಾವ ಮಲ್ಲಾಬಾದಿ ಮನವಿ ಮಾಡಿದ್ದಾರೆ.

ಶಿಕ್ಷಣ ಇಲಾಖೆಯಿಂದ ನಾಲ್ಕು ಎಕರೆ ಜಮೀನು ಹಸ್ತಾಂತರ ಪ್ರಜಾಸೌಧ ನಿರ್ಮಾಣಕ್ಕೆ ₹ 17ಕೋಟಿ ಮಂಜೂರು ಒಣ ಪ್ರತಿಷ್ಠೆಗೆ ಕೆಲ ಸಂಘಟನೆಗಳು ವಿರೋಧ-ಆರೋಪ

ನಾಲ್ಕು ಎಕರೆ ಜಮೀನಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆಯಿಂದ ಕಂದಾಯ ಇಲಾಖೆಗೆ ಜಮೀನು ಹಸ್ತಾಂತರವಾಗಿದೆ. ಸಾಕಷ್ಟು ಜಾಗವಿದೆ. ಪ್ರಜಾಸೌಧ ನಿರ್ಮಾಣದಿಂದ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆ ಆಗದು
ಸಿದ್ದಾರೂಢ ಬನ್ನಿಕೊಪ್ಪ ತಹಶೀಲ್ದಾರ್

'ಅಭಿವೃದ್ಧಿ ಕೆಲಸಕ್ಕೆ ತಕರಾರು ಇಲ್ಲ'

ನಮ್ಮದು ಅಭಿವೃದ್ಧಿ ಕೆಲಸಕ್ಕೆ ತಕರಾರು ಇಲ್ಲ. ಆದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿಯೇ ಹಠಕ್ಕೆ ಬಿದ್ದು ಪ್ರಜಾಸೌಧ ನಿರ್ಮಾಣ ಮಾಡುತ್ತಿರುವುದು ಏಕೆ?. ಸದ್ಯ ತಹಶೀಲ್ದಾರ್‌ ಕಚೇರಿಯ ಪ್ರದೇಶದಲ್ಲಿ ಸಾಕಷ್ಟು ಜಾಗವಿದೆ. ಇಲ್ಲವೆ ಬೇರೆಡೆ ನಿರ್ಮಿಸಿ. ಪ್ರಜಾಸೌಧ ನಿರ್ಮಾಣದಿಂದ ಗದ್ದಲದ ವಾತವರಣ ಉಂಟಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಹೆಚ್ಚಿನ ತೊಂದರೆಯಾಗುವ ಆತಂಕವಿದೆ. ಯಾವ ಉದ್ದೇಶಕ್ಕಾಗಿ ಸರ್ಕಾರ ಜಮೀನು ವಶಪಡಿಸಿಕೊಂಡಿದಿಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸಬೇಕು ಎಂಬುವುದು ನಮ್ಮ ವಾದವಾಗಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.