ADVERTISEMENT

‘ಗೋಲಿಬಾರ್‌: ಮೃತರ ಕುಟುಂಬಕ್ಕೆ ₹ 25 ಲಕ್ಷ ನೀಡಿ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 14:52 IST
Last Updated 28 ಡಿಸೆಂಬರ್ 2019, 14:52 IST
ಇಲಿಯಾಸ್
ಇಲಿಯಾಸ್   

ಕಲಬುರ್ಗಿ: ‘ಮಂಗಳೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಯುವಕರ ಮನೆಯವರಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು’ ಎಂದು ವೆಲ್‌ಫೇರ್‌ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರ ಘಟಕದ ಅಧ್ಯಕ್ಷ ಡಾ.ಎಸ್.ಕ್ಯು.ಆರ್. ಇಲಿಯಾಸ್ ಆಗ್ರಹಿಸಿದರು.

‘ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಡಿ. 19ರಂದು ಮಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಗೋಲಿಬಾರ್‌ ಮಾಡಲಾಗಿದೆ. ಇಬ್ಬರು ಅಮಾಯಕರ ಸಾವಿಗೆ ಕಾರಣರಾದ ಜಿಲ್ಲೆಯ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪೋಲಿಸ್ ಕಮೀಷನರ್ ಹರ್ಷಕುಮಾರ ಅವರನ್ನು ವಜಾಗೊಳಿಸಬೇಕು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಆದರೆ, ಆ ಜಿಲ್ಲೆಯ ಉನ್ನತ ಅಧಿಕಾರಿಗಳು ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಸತ್ಯ ಹೊರಬೀಳಬೇಕಾದೆ ಸಿಬಿಐಗೆ ಒಪ್ಪಿಸಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ಕೇಂದ್ರ ಸರಕಾರ ಸಂವಿಧಾನ ಪರಿಚ್ಛೇಧ 14, 15, ಮತ್ತು 21ರ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ರೂಪಿಸಿದೆ. ಇದು ಜಾರಿಯಾಗಲು ಬಿಡುವುದಿಲ್ಲ’ ಎಂದರು.

‘ಗೋಲಿಬಾರ್‌ನಲ್ಲಿ ಮೃತಪಟ್ಟವರ ವಿರುದ್ಧವೇ ಎಫ್ಐರ್ ದಾಖಲು ಮಾಡಲಾಗಿದೆ. ಪೊಲೀಸರು ತಪ್ಪಿನಿಂದ ನುಣುಚಿಕೊಳ್ಳಲು ಈ ಹುನ್ನಾರ ನಡೆಸಿದ್ದಾರೆ. ಗುಂಡು ಹಾರಿಸಿ ಎರಡು ಜೀವ ಕೊಂದವರಿಗೆ ಬಹುಮಾನ ಕೊಟ್ಟು, ಅವರ ಕ್ರಮ ಸಮರ್ಥಿಸಿ ಕೊಂಡಿರುವ ರಾಜ್ಯ ಸರ್ಕಾರ ತಾನು ಕೋಮುವಾದಿ ಎಂದು ಸಾಬೀತುಪಡಿಸಿದೆ’ ಎಂದೂ ದೂರಿದರು.

‘ಮೃತರ ಕುಟುಂಬದವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಕನಿಕರದ ನಾಟಕ ಮಾಡಿದ್ದಾರೆ. ತಲಾ ₹ 10 ಲಕ್ಷ ಪರಿಹಾರ ಘೋಷಿಸಿ, ವಾಪಸ್‌ ಕಿತ್ತುಕೊಂಡಿದ್ದಾರೆ. ಇದೆಂಥ ಕ್ರಮ? ಮೃತಪಟ್ಟ ಕುಟುಂಬದವರಿಗೆ ಮಾಡಿದ ಅವಮಾನವಿದು’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮೀನಿನ ಬಂದರಿನಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಜಲೀಲ್ ಅವರು ಶಾಲೆಯಿಂದ ಬಂದ ತನ್ನ ಮಕ್ಕಳನ್ನು ಮನೆಯೊಳಗೆ ಸೇರಿಸಿ ಹೊರಗೆ ನಡೆಯುತ್ತಿದ್ದರು. ಆಗ ಗಲಾಟೆಯ ಸದ್ದಿಗೆ ಹೊರಬಂದು ನೋಡುವಷ್ಟರಲ್ಲಿ ಕುಟುಂಬದರ ಎದುರಿಗೆ ಪೋಲಿಸರ ಗುಂಡಿಗೆ ಬಲಿಯಾದರು. ಯಾರದೋ ಮೇಲಿನ ಸೇಡಿಗೆ ಇನ್ಯಾರನ್ನೋ ಬಲಿ ಪಡೆದಿದ್ದಾರೆ’ ಎಂದೂ ಇಲಿಯಾಸ್ ತಿಳಿಸಿದರು.

ಪಕ್ಷದ ಉಪಾದ್ಯಕ್ಷ ಅಬ್ದುಲ್ ಅಹ್ಮದ ಫರಾನ್, ರಾಜ್ಯ ಘಟಕದ ಅಧ್ಯಕ್ಷ ತಾಹೇರ್ ಹುಸೇನ್, ಉಪಾಧ್ಯಕ್ಷ ತಾಜೋದ್ದಿನ್ ಇಳಕಲ್, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಅಬ್ದುಲ್ ಬಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.