ADVERTISEMENT

ಚಿತ್ತಾಪುರ: ಕೋಲಿ ಕಬ್ಬಲಿಗ ಎಸ್‌ಟಿ ಪ್ರಸ್ತಾವನೆ ಕಳಿಸಲು ಪ್ರಿಯಾಂಕ್ ಖರ್ಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:07 IST
Last Updated 27 ಡಿಸೆಂಬರ್ 2025, 6:07 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಚಿತ್ತಾಪುರ: ‘ಕೋಲಿ, ಕಬ್ಬಲಿಗ, ಕಬ್ಬೇರ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಭರವಸೆ ನೀಡಿದ್ದಾರೆ’ ಎಂದು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ್, ಪ್ರಧಾನ ಕಾರ್ಯದರ್ಶಿ ಕಾರಣಕುಮಾರ ಅಲ್ಲೂರ್ ಅವರು ಹೇಳಿದ್ದಾರೆ.

‘ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನ ಸಮಯದಲ್ಲಿ ತಾಲ್ಲೂಕು ಕೋಲಿ ಸಮಾಜದ ಮುಖಂಡರು ಸಚಿವರನ್ನು ಭೇಟಿ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ಮನವಿ ಮಾಡಿಕೊಂಡಾಗ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಕೋಲಿ, ಕಬ್ಬಲಿಗ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸುವ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಬೇಕಾದ ಪೂರಕ ದಾಖಲೆಗಳನ್ನು ಸಮಾಜದಿಂದ ಆದಷ್ಟು ಬೇಗ ಒದಗಿಸಲು ಸಚಿವರು ಸಲಹೆ ನೀಡಿದ್ದಾರೆ. ಆದರೇ ಯಾರೊಬ್ಬರೂ ಸರ್ಕಾರಕ್ಕೆ ಸಮರ್ಥ ದಾಖಲೆ ಸಲ್ಲಿಸದೆ ಕೇವಲ ಭಾಷಣ ಮಾಡುತ್ತ, ಹೇಳಿಕೆ ನೀಡುತ್ತಾ ಸಮಾಜದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ವಿಷಯ ಸಾಮಾಜಿಕ ಕಳಕಳಿಗಿಂತ ರಾಜಕೀಯ ವಿಷಯವಾಗಿ ಬಳಕೆಯಾಗುತ್ತಿದೆ. ಸರ್ಕಾರಕ್ಕೆ ಮನವಿ ಸಲ್ಲಿಸದೆ ಮತ್ತು ಸೂಕ್ತ ದಾಖಲೆ ಸಲ್ಲಿಸದೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕಳೆದ 2020 ರಲ್ಲಿ ಕೇಂದ್ರ ಸರ್ಕಾರವು ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಿತ್ತು. ನಂತರ ರಾಜ್ಯದಲ್ಲಿ ತಳವಾರ ಜನರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಗೊಂದಲ ಉಂಟಾಗಿತ್ತು. ನಮ್ಮ ಸಹೋದರ ಸಮಾಜವಾದ ತಳವಾರ ಜಾತಿಯ ಜನರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಮನಗಂಡು, ತಳವಾರ ಜನರಿಂದ ಮಾಹಿತಿ ಪಡೆದುಕೊಂಡು ಸಮಸ್ಯೆಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಸಭೆ ಆಯೋಜಿಸಿ, ರಾಜ್ಯ ಸರ್ಕಾರದಿಂದ ಹೊಸದಾಗಿ ಆದೇಶ ಹೊರಡಿಸುವುದಕ್ಕೆ ಸಚಿವ ಪ್ರಿಯಾಂಕ್ ಅವರ ಅವಿರತ ಶ್ರಮವಿದೆ ಮತ್ತು ತಳವಾರ ಜನಾಂಗದ ಕಳಕಳಿಯಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.