ADVERTISEMENT

ತಾಲ್ಲೂಕು ಕೇಂದ್ರಗಳಲ್ಲೂ ಕೋವಿಡ್‌ ಸೆಂಟರ್‌ ತೆರೆಯಿರಿ

ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ವಿಫಲ: ಪ್ರಿಯಾಂಕ್‌ ಖರ್ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 15:14 IST
Last Updated 16 ಏಪ್ರಿಲ್ 2021, 15:14 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗಾಗಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಕೋವಿಡ್ ಕೇರ್‌ ಸೆಂಟರ್‌ಗಳನ್ನು ಆರಂಭಿಸಬೇಕು’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಜನರನ್ನು ರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಪೊಲೀಸ್‌ ಅಧಿಕಾರಿಗಳೆಲ್ಲ ಏನು ಮಾಡುತ್ತಿದ್ದಾರೆ? ಮಾಸ್ಕ್‌ ಧರಿಸುವಂತೆ ಜನರಿಗೆ ಅರಿವು ಮೂಡಿಸುವ ಕನಿಷ್ಠ ಸೌಜನ್ಯವೂ ಇಲ್ಲ. ಯಾರಿಗೂ ಮುಂದಾಲೋಚನೆಯೇ ಇಲ್ಲ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯ ಗಡಿಗಳಲ್ಲಿ ತೆರೆದ ಚೆಕ್‌ಪೋಸ್ಟ್‌ಗಳಲ್ಲಿ ಹಣ ಪಡೆದು ವಾಹನ ಒಳಗೆ ಬಿಡಲಾಗುತ್ತಿದೆ. ಅಧಿಕಾರಿಗಳು ಇದನ್ನು ಕಂಡೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಗಡಿಗಳಲ್ಲೇ ಕೋವಿಡ್‌ ತಪಾಸಣೆಗೆ ವ್ಯವಸ್ಥೆ ಮಾಡಬೇಕು, ಸೋಂಕಿತರಿಗೆ ಅಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರೂ ಕಿವಿಗೆ ಹಾಕಿಕೊಂಡಿಲ್ಲ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.‌

ADVERTISEMENT

‘ಜಿಲ್ಲಾಡಳಿತ ನೀಡುತ್ತಿರುವ ಕೊರೊನಾ ಅಂಕಿ–ಅಂಶಗಳೇ ತಾಳೆಯಾಗುತ್ತಿಲ್ಲ. ಬುಲೆಟಿನ್‌ನಲ್ಲಿ ಒಂದು ರೀತಿ ಇದ್ದರೆ ಸರ್ಕಾರದ ಪೋರ್ಟಲ್‌ನಲ್ಲಿ ಇನ್ನೊಂದು ರೀತಿ ಇದೆ. ಹೆಚ್ಚು ಸೋಂಕಿತರು ಇದ್ದರೂ ಜಿಲ್ಲಾಡಳಿತ ಕಡಿಮೆ ಸಂಖ್ಯೆ ತೋರಿಸುತ್ತಿದೆ ಎಂಬ ಅನುಮಾನ ಬರುತ್ತಿದೆ’ ಎಂದರು.

‘ಕಳೆದ ಬಾರಿ ಕೆಕೆಆರ್‌ಡಿಬಿಯಿಂದ ಒಂದು ‘ಕಾಲ್‌ ಸೆಂಟರ್‌’ ಮಾಡಿದ್ದರು. ಅದು ಈಗ ಏನಾಯಿತು? ಎಷ್ಟು ಜನರಿಗೆ ಪ್ರಯೋಜನವಾಯಿತು ಎಂಬ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ ಎಷ್ಟು ಆಕ್ಸಿಜನ್‌ ಬೆಡ್‌ ಇವೆ, ವೆಂಟಿಲೇಟರ್‌ ಎಷ್ಟಿವೆ, ಸದ್ಯದ ಪರಿಸ್ಥಿತಿಗೆ ಸಾಲುತ್ತವೆಯೇ ಇಲ್ಲವೇ ಎಂಬ ಅರಿವು ಅಧಿಕಾರಿಗಳಿಗೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊರೊನಾ ಬಂದಿದ್ದರಿಂದ ಅಧಿಕಾರಿಗಳನ್ನು ಕೇಳುವವರೇ ಇಲ್ಲವಾಗಿದೆ. ಸಚಿವ ಕಾರಜೋಳ ಅವರು ಗುಣಮುಖ ಆಗುವವರೆಗೂ ಜಿಲ್ಲಾ ಉಸ್ತುವಾರಿಗೆ ಬೇರೊಬ್ಬರನ್ನು ನೇಮಿಸಿ, ಸೋಂಕು ನಿಯಂತ್ರಣ ಮಾಡಬೇಕು’ ಎಂದೂ ಆಗ್ರಹಿಸಿದರು.‌

‘ರಾಜ್ಯದಲ್ಲಿ ವೈರಾಣು ಹತೋಟಿಗೆ ಏನು ಕ್ರಮ ಕೈಗೊಂಡರೂ ಕಾಂಗ್ರೆಸ್‌ನ ಸಮ್ಮತಿ ಇದೆ. ಆದರೆ, ಅದಕ್ಕೂ ಪೂರ್ವದಲ್ಲಿ ಸಂಕಷ್ಟಕ್ಕೆ ಒಳಗಾಗುವ ಬಡವರು, ವರ್ತಕರು, ಕೃಷಿಕರಿಗೆ ತಲಾ ₹ 10 ಸಾವಿರ ಪರಿಹಾರ ನೀಡಿ ನಂತರ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

‘ರಾಜ್ಯ ಸರ್ಕಾರ ಈಗ ಹಣದ ಹಿಂದೆ ಬಿದ್ದಿದೆ. ದುಡ್ಡು ಕಬಳಿಸಲು ಅನುಕೂಲವಾಗುವಂಥ ಯೋಜನೆಗಳನ್ನು ಮಾತ್ರ ಅನುಷ್ಠಾನ ಮಾಡಲಾಗುತ್ತಿದೆ. ಕೊರೊನಾದಿಂದ ಜನ ರಸ್ತೆಯಲ್ಲಿ ಬಿದ್ದು ಸಾಯುವ ಸ್ಥಿತಿ ಬಂದಿದ್ದರೂ ಕಣ್ಣೆತ್ತಿ ನೋಡುತ್ತಿಲ್ಲ’ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೋಡ, ಭೀಮಣ್ಣ ಸಾಲಿ ಇದ್ದರು.

‘ಕಾಳಸಂತೆಯಲ್ಲಿ ಔಷಧಿ ಮಾರಾಟ ತಡೆಯಿರಿ’

‘ಕೋವಿಡ್‌ ನಿವಾರಣೆಗೆ ಬಳಸುವ ‘ರೆಮ್‌ ಡಿಸಿವಿರ್‌’ ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಈ ಕಾಳದಂಧೆ ನಡೆಸುತ್ತಿವೆ. ಇದರಿಂದ ಔಷಧಿ ಕೊರತೆ ಉಂಟಾಗಿದ್ದು, ಸೋಂಕಿತರು ಸಾವಿನ ಮನೆ ಬಾಗಿಲು ತಟ್ಟುತ್ತಿದ್ದಾರೆ. ಜನರ ಜೀವ ಉಳಿಸುವ ಯೋಗ್ಯತೆ ಇಲ್ಲದಿದ್ದರೆ ಆಚೆಗೆ ತೊಲಗಿ’ ಎಂದು ಮುಖಂಡ ಡಾ.ಶರಣಪ್ರಕಾಶ ಪಾಟೀಲ ಕಿಡಿ ಕಾರಿದರು.

‘ಜಿಲ್ಲಾಧಿಕಾರಿ ಒಬ್ಬರನ್ನೇ ಎಲ್ಲದಕ್ಕೂ ಹೊಣೆ ಮಾಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ತಕ್ಷಣ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಸೋಂಕು ನಿಯಂತ್ರಣಕ್ಕೆ ಯುದ್ಧೋಪಾದಿ ಕೆಲಸ ಮಾಡಬೇಕು’ ಎಂದೂ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.