ADVERTISEMENT

ಕಲಬುರಗಿಗೆ ಬಿಜೆಪಿ ಕೊಡುಗೆ ಏನು; ಪ್ರಿಯಾಂಕ್ ಖರ್ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 6:15 IST
Last Updated 12 ಫೆಬ್ರುವರಿ 2023, 6:15 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಕೇಂದ್ರದಲ್ಲಿ ಒಂಬತ್ತು ವರ್ಷ ಹಾಗೂ ರಾಜ್ಯದಲ್ಲಿ ನಾಲ್ಕು ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳು ಕಲಬುರಗಿ ಜಿಲ್ಲೆಗೆ ಏನು ಕೊಡುಗೆ ನೀಡಿವೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರ ‘ಕಲ್ಯಾಣ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಶೂನ್ಯ’ ಹೇಳಿಕೆಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ‘ನೆಟೆ ರೋಗದಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಧನ ಕೊಡುವ ಯೋಗ್ಯತೆ ಇಲ್ಲದ ಬಿಜೆಪಿಗೆ ಕಲಬುರಗಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

‘ಅಧಿಕಾರಿಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ಕೊಟ್ಟು ಮೂರು ಮಹತ್ವದ ಯೋಜನೆಗಳನ್ನು ಬಹಿರಂಗಪಡಿಸಿ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮ, ಅರ್ಧಕ್ಕೆ ನಿಂತ ಕಾಮಗಾರಿಗಳು, ಎಸ್‌ಸಿ/ಎಸ್‌ಟಿ, ಟಿಎಸ್‌ಪಿ ಅನುದಾನದ ಅಸಮರ್ಪಕ ಬಳಕೆ ಬಗ್ಗೆ ಏಕೆ ಮಾತಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿಯ ಎಸ್.ಟಿ ಮೋರ್ಚಾ ಘಟಕ ದೆಹಲಿಗೆ ಹೋಗಿ ಕೋಲಿ, ಕಬ್ಬಲಿಗ ಸೇರಿ ಇತರೆ ಉಪಜಾತಿಗಳನ್ನು ಎಸ್‌ಟಿ ಸೇರ್ಪಡೆಯ ನಾಟಕ ಮಾಡಿದೆ. ದೆಹಲಿಗೆ ಹೋಗಲು ಇಷ್ಟು ವರ್ಷಗಳು ಬೇಕಾಯಿತೆ? ನಿಮಗೆ ರಾಷ್ಟ್ರ ನಾಯಕರ ಬಳಿ ಮಾತಾಡಲು ದಮ್ ಇಲ್ಲದಿದ್ದರೆ, ನಿಮ್ಮಿಂದ ಆಗದಿದ್ದರೆ ಹೇಳಿ, ನಾನು ಹೋಗಿ ಕೇಳುತ್ತೇನೆ’ ಎಂದರು.

‘ಡಾ.ಉಮೇಶ ಜಾಧವ ಮಾಯಾವಿ ಸಂಸದರಾಗಿದ್ದಾರೆ. ಅವರು ಸಂಸದ ಆದ ಬಳಿಕ ಜಿಲ್ಲೆಯಲ್ಲಿ ಎಲ್ಲವೂ ಮಾಯವಾಗುತ್ತಿವೆ’ ಎಂದು ಟೀಕಿಸಿದರು.

ಉತ್ಸವಕ್ಕೆ ಕೆಕೆಆರ್‌ಡಿಬಿ ಅನುದಾನ ಬೇಡ: ‘ಬಹು ದಿನಗಳ ನಂತರ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಸುತ್ತಿರುವುದು ಸರಿಯಲ್ಲ. ಬೇರೆ ಜಿಲ್ಲೆಗಳು ಸಹ ಉತ್ಸವ ನಡೆಸಲು ಅನುದಾನಕ್ಕೆ ಬೇಡಿಕೆ ಇರಿಸುತ್ತವೆ. ಆಗ, ಅಭಿವೃದ್ಧಿಗಾಗಿ ಇರುವ ನೂರಾರು ಕೋಟಿ ರೂಪಾಯಿ ಉತ್ಸವಕ್ಕೆ ನೀಡಬೇಕಾಗುತ್ತದೆ. ಹಾಗಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಗತ್ಯವಾದಷ್ಟು ಅನುದಾನ ಪಡೆಯಬೇಕು’ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

‘ಮತದಾರರ ಹೆಸರು ಡಿಲೀಟ್‌: ಅಕ್ರಮ’

ಕಲಬುರಗಿ: ‘ಮತಪಟ್ಟಿಯಿಂದ ಮತದಾರರ ಹೆಸರು ತೆಗದು ಹಾಕುವ ಫಾರ್ಮ್‌–7 ಅನ್ನು ಭರ್ತಿ ಮಾಡದೆ ನಕಲಿ ಮೊಬೈಲ್‌ ಸಂಖ್ಯೆ ಬಳಸಿ ಆನ್‌ಲೈನ್‌ನಲ್ಲಿ ಅಕ್ರಮವಾಗಿ ಅರ್ಜಿ ಸಲ್ಲಿಸಲಾಗುತ್ತಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಮುಖಂಡ ಬಿ.ಆರ್.ಪಾಟೀಲ ಆರೋಪಿಸಿದರು.

ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಆಯೋಗವು ಮತದಾರರ ವಿಳಾಸ ಬದಲಾವಣೆಗೆ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿದೆ. ಕಾಂಗ್ರೆಸ್‌ ಪರ ಒಲವಿರುವ ಮತದಾರರನ್ನು ಗುರಿ ಮಾಡಿಕೊಂಡು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿ ಇತರೆ ರಾಜ್ಯಗಳ ನಕಲಿ ಮೊಬೈಲ್‌ ಸಂಖ್ಯೆ ಬಳಸಿ ಮನವಿ ಸಲ್ಲಿಸಲಾಗಿದೆ. ಇಂತಹ 30ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಬಿಜೆಪಿಯ ಹುನ್ನಾರ’ ಎಂದು ದೂರಿದರು.

‘ಆಳಂದ ವಿಧಾನ ಸಭಾ ಕ್ಷೇತ್ರ ಒಂದರಲ್ಲೇ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಂತೆ 6,670 ಆನ್‌ಲೈನ್‌ ಅರ್ಜಿ ಸಲ್ಲಿಕೆ ಆಗಿವೆ. ಬಿಎಲ್‌ಒಗಳ ಮೊಬೈಲ್‌ಗೆ ಸಂದೇಶ ಬಂದಿದ್ದು, ಕ್ಷೇತ್ರದ ಯಾವೊಬ್ಬ ಮತದಾರರೂ ಅರ್ಜಿ ಸಲ್ಲಿಸಿಲ್ಲ’ ಎಂದರು.

‘ಕರ್ನಾಟಕ ಕೈತಪ್ಪುವ ಹತಾಶೆಯಿಂದ ಬಿಜೆಪಿಯು ಅಡ್ಡದಾರಿ ಹಿಡಿದು, ಹೊರ ರಾಜ್ಯದಲ್ಲಿ ಕುಳಿತು ಮತದಾರರ ಹೆಸರು ತೆಗಿಸುವ ಸಾಹಸಕ್ಕೆ ಕೈಹಾಕಿದೆ. ರಾಜ್ಯದಾದ್ಯಂತಹ ಇಂತಹ ಪ್ರಕರಣ ನಡೆದಿರುವ ಶಂಕೆ ಇದೆ. ಈ ಬಗ್ಗೆ ರಾಷ್ಟ್ರೀಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಒಬಿಸಿ ವಿಭಾಗ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ, ಮುಖಂಡರಾದ ಡಾ. ಕಿರಣ ದೇಶಮುಖ, ಅಶೋಕ ವೀರನಾಯಕ, ಸಂತೋಷ ದಣ್ಣೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.