ಚಿತ್ತಾಪುರ (ಕಲಬುರಗಿ ಜಿಲ್ಲೆ): ‘ನನ್ನ ಇಡೀ ಜೀವನ ಬಾಬಾಸಾಹೇಬರ ಆದರ್ಶಗಳ ಹಾದಿಯಲ್ಲಿ ಸಾಗಿಸಿದ್ದೇನೆ. ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಬಿಜೆಪಿಯೂ ಆ ಕೆಲಸ ಮಾಡುತ್ತದೆಯೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ‘ಹೆಣ್ಣು ಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಬಿಜೆಪಿ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ? ಎಂದು ಸವಾಲು ಹಾಕಿದ್ದಾರೆ.
‘ಕೆಲಸಕ್ಕಾಗಿ ಬಂದ ಯುವತಿಯನ್ನು ಸಚಿವ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ, ಬಿಜೆಪಿಯ ಯಾರೊಬ್ಬರೂ ಆ ಸಚಿವರಿಂದ ಕ್ಷಮೆ ಕೇಳಿಸಲಿಲ್ಲ. ಕೇಂದ್ರದ ಸಚಿವರೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಂದಿಗೆ ನಡೆಸಿದ್ದ ವಿಡಿಯೊ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ’ ಎಂದು ಬಿಜೆಪಿ ನಡೆಯನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.