ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ; ದೊಡ್ಡ ಕುಳಗಳನ್ನೂ ಬಂಧಿಸಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 17:58 IST
Last Updated 1 ಮೇ 2022, 17:58 IST
ಶಾಸಕ ಪ್ರಿಯಾಂಕ್‌ ಖರ್ಗೆ
ಶಾಸಕ ಪ್ರಿಯಾಂಕ್‌ ಖರ್ಗೆ   

ಕಲಬುರಗಿ: ‘ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಈಗ ಬಂಧನವಾಗಿರುವವರು ಚಿಕ್ಕ ಮೀನುಗಳು ಮಾತ್ರ. ಇನ್ನೂ ದೊಡ್ಡದೊಡ್ಡ ತಿಮಿಂಗಿಲುಗಳೂ ಇದರಲ್ಲಿವೆ. ರಾಜ್ಯ ಸರ್ಕಾರ ತನಿಖೆ ನಡೆಸಿ ಎಲ್ಲರನ್ನೂ ಬಯಲಿಗೆಳೆಯಬೇಕು’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

‘ತನಿಖೆ ಮುಗಿಯುವ ಮುನ್ನವೇ ಸರ್ಕಾರ ಈ ಪರೀಕ್ಷೆಯನ್ನು ರದ್ದು ಮಾಡಿದೆ. ದೊಡ್ಡ ಕುಳಗಳನ್ನು ರಕ್ಷಿಸುವ ಉದ್ದೇಶ ಇದರ ಹಿಂದಿದೆ. ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ರುದ್ರಗೌಡ ಪಾಟೀಲ ಅವರ ಹಂತದಲ್ಲಿ ಇಷ್ಟೆಲ್ಲ ಅಕ್ರಮ ನಡೆಸಲು ಸಾಧ್ಯವಿಲ್ಲ. ಇವರೆಲ್ಲರನ್ನೂ ಬೆಳೆಸಿದ ಕೈಗಳು ಬೇರೆ ಇವೆ. ಅವರನ್ನು ತಪ್ಪಿಸಿಕೊಳ್ಳಲು ಬಿಟ್ಟರೆ ಅಭ್ಯರ್ಥಿಗಳಿಗೆ ಮೋಸ ಮಾಡಿದಂತೆ ಆಗುತ್ತದೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘2021ರ ಡಿಸೆಂಬರ್‌ 4, 5ರಂದು ಗ್ರೂಪ್‌–ಸಿ ತಾಂತ್ರಿಕೇತರ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಯೂ ಜ್ಞಾನಜ್ಯೋತಿ ಶಾಲೆಯ ಕೇಂದ್ರದಲ್ಲೇ ನಡೆದಿದೆ. ಆ ಸಂದರ್ಭದಲ್ಲಿ ಕೇಂದ್ರ ಪರಿಶೀಲನೆಗೆ ಹೋಗಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ತಕರಾರು ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಈ ಕೇಂದ್ರಕ್ಕೆ ನಿಯೋಜನೆಗೊಂಡ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆಯ ವರ್ಷನ್‌ ಕೋಡ್‌ಗಳನ್ನು ಅಭ್ಯರ್ಥಿಗಳಿಗೆ ನೀಡುತ್ತಿರುವ ಬಗ್ಗೆ ದೂರು ಬಂದಿದೆ. ಆದ್ದರಿಂದ ಮೇಲ್ವಿಚಾರಕನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದ್ದರು. ಆದರೂ ಸರ್ಕಾರ ಏನೂ ಕ್ರಮ ವಹಿಸಲಿಲ್ಲ. ಅಕ್ರಮ ನಡೆಯಲಿದೆ ಎಂದು ಮುಂಚೆಯೇ ಅಧಿಕಾರಿಗಳೇ ಮಾಹಿತಿ ನೀಡಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದು ಏಕೆ? ಮತ್ತೆ ಮತ್ತೆ ಇದೇ ಶಾಲೆಗೆ ಪರೀಕ್ಷಾ ಕೇಂದ್ರ ಕೊಟ್ಟಿದ್ದು ಏಕೆ? ಇವರು ಶಾಲೆಯನ್ನು ಕಲೆಕ್ಷನ್‌ ಹಬ್‌ ಮಾಡಿಕೊಂಡಿದ್ದಾರೆ’ ಎಂದೂ ಪ್ರಿಯಾಂಕ್‌ ದೂರಿದರು.

ADVERTISEMENT

‘ಎಫ್‌ಡಿಎ, ಎಸ್‌ಡಿಎ, ನರ್ಸಿಂಗ್, ಪ‍ಶುಸಂಗೋಪನೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳೂ ಇದೇ ಶಾಲೆಯಲ್ಲಿ ನಡೆದಿವೆ. ಹಾಗಾದರೆ, ಸರ್ಕಾರದ ಮುಂದಿನ ನಡೆ ಏನು? ಜನರಿಗೆ ವಿಶ್ವಾಸ ಬರುವಂತೆ ಯಾವ ಹೆಜ್ಜೆ ಇಡುತ್ತಾರೆ ತಿಳಿಸಬೇಕು’ ಎಂದೂ ಆಗ್ರಹಿಸಿದರು.

ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ಡಾ.ಕಿರಣ ದೇಶಮುಖ, ಮುಖಂಡ ಶಿವಾನಂದ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.