ADVERTISEMENT

ಜಾಧವ ಸಹೋದರ ಭಾಷಣ; ಪ್ರಿಯಾಂಕ್‌ ಆಕ್ರೋಶ

ಶಿಷ್ಟಾಚಾರ ಉಲ್ಲಂಘಿಸಿ ಮಾತನಾಡಲು ಅವಕಾಶ ಆರೋಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 9:50 IST
Last Updated 16 ಆಗಸ್ಟ್ 2019, 9:50 IST
ಪ್ರಿಯಾಂಕ್‌ ಖರ್ಗೆ ಅವರ ಟ್ವೀಟ್‌
ಪ್ರಿಯಾಂಕ್‌ ಖರ್ಗೆ ಅವರ ಟ್ವೀಟ್‌   

ಕಲಬುರ್ಗಿ: ಸಂಸದ ಡಾ.ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ ಅವರುಚುನಾಯಿತ ಹುದ್ದೆಯಲ್ಲಿ ಇಲ್ಲದಿದ್ದರೂ ನೂತನ ತಾಲ್ಲೂಕು ಕೇಂದ್ರ ಕಾಳಗಿಯಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡಿದ್ದಕ್ಕೆ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನೀವು ಶಾಸಕರ ಚಿಕ್ಕಪ್ಪ ಅಥವಾ ಸಂಸದರ ಸಹೋದರ ಆಗಿದ್ದರೆ ತಾಲ್ಲೂಕು ಕೇಂದ್ರದಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಷಣ ಮಾಡಬಹುದು’ ಎಂದು ಪ್ರಿಯಾಂಕ್‌ ಟ್ವಿಟ್ಟರ್‌ನಲ್ಲಿ ಕುಟುಕಿದ್ದಾರೆ. ‘ಸ್ವಯಂಘೋಷಿತ ರಾಷ್ಟ್ರೀಯತಾವಾದಿ ಎನಿಸಿಕೊಂಡವರು ಜಿಲ್ಲಾ ಕೇಂದ್ರಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ವಿಫಲರಾಗಿದ್ದಾರೆ’ ಎಂದೂ ಅದೇ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.‌

ಏನಿದು ಪ್ರಕರಣ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಅವರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ, ಅವರು ಗೈರಾಗಿದ್ದರು.

ADVERTISEMENT

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ತಹಶೀಲ್ದಾರರು ಧ್ವಜಾರೋಹಣ ನೆರವೇರಿಸಿದರು. 9ಕ್ಕೆ ಧ್ವಜಾರೋಹಣ ನಡೆಸಬೇಕಿತ್ತು. ಆದರೆ, ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚೆಯೇ ತಹಶೀಲ್ದಾರ್‌ ನೀಲಪ್ರಭಾ ಬಬಲಾದ ಅವರು ಧ್ವಜಾರೋಹಣ ನೆರವೇರಿಸಿದರು. ಅದಾದ ನಂತರ ಬಂದ ರಾಮಚಂದ್ರ ಜಾಧವ ಹಾಗೂ ಅವರ ಬೆಂಬಲಿಗರು ನಿಗದಿತ ಸಮಯಕ್ಕಿಂತ ಮುಂಚೆಯೇ ಧ್ವಜ ಹಾರಿಸಿದ್ದಕ್ಕೆ ಆಕ್ಷೇಪಿಸಿದರು.

ಅವರನ್ನು ಸಮಾಧಾನಪಡಿಸಲು ಸಂಘಟಕರು ಅವರನ್ನು ವೇದಿಕೆಗೆ ಆಹ್ವಾನಿಸಿದರು. ಆದರೆ, ಆಹ್ವಾನ ಪತ್ರಿಕೆಯಲ್ಲಿ ರಾಮಚಂದ್ರ ಜಾಧವ ಹೆಸರು ಇರಲಿಲ್ಲ. ಶಿಷ್ಟಾಚಾರದ ಪ್ರಕಾರ ಅವರನ್ನು ವೇದಿಕೆಗೆ ಕರೆಯುವಂತೆಯೂ ಇರಲಿಲ್ಲ. ಕರೆದಿದ್ದಲ್ಲದೇ ಮಾತನಾಡಲೂ ನಿರೂಪಕರು ಅವಕಾಶ ಕೊಟ್ಟರು. ಇದನ್ನು ಗಮನಿಸಿದ ಶಾಸಕ ಪ್ರಿಯಾಂಕ್‌ ಖರ್ಗೆ ಈ ಟ್ವೀಟ್‌ ಮಾಡಿದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್‌ ನೀಲಪ್ರಭಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.