ವೀಸಾ ನಿರಾಕರಣೆ ( ಸಾಂದರ್ಭಿಕ ಚಿತ್ರ)
ಕಲಬುರಗಿ: ‘ಸಚಿವ ಪ್ರಿಯಾಂಕ್ ಖರ್ಗೆ ಅವರು ಅಮೆರಿಕಕ್ಕೆ ತೆರಳಲು ವೀಸಾ ನಿರಾಕರಿಸಿದ್ದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ’ ಎಂದು ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಿನೋದ್ ವಿ. ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ ಬಾಸ್ಟನ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಎರಡು ತಂತ್ರಜ್ಞಾನ ಶೃಂಗಸಭೆಗಳಲ್ಲಿ ಪ್ರಿಯಾಂಕ್ ಅವರು ಕರ್ನಾಟಕ ಸರ್ಕಾರ ಹಾಗೂ ಸಂಬಂಧಿತ ಇಲಾಖೆಯ ಸಚಿವರ ಮಟ್ಟದ ಪ್ರತಿನಿಧಿಯಾಗಿ ಪಾಲ್ಗೊಳ್ಳಬೇಕಿತ್ತು. ಅವರಿಗೆ ವೀಸಾ ನಿರಾಕರಿಸಿ ತಡೆದಿದ್ದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ’ ಎಂದರು.
‘ಅಮೆರಿಕಕ್ಕೆ ತೆರಳಲು ಸಚಿವರನ್ನೊಳಗೊಂಡ 12 ಅಧಿಕಾರಿಗಳ ಪಟ್ಟಿಯನ್ನು ವಿದೇಶಾಂಗ ಇಲಾಖೆಗೆ ಕಳುಹಿಸಲಾಗಿತ್ತು. ಅದರಲ್ಲಿ ಪ್ರಿಯಾಂಕ್ ಅವರ ಹೆಸರನ್ನು ಮಾತ್ರ ಕೈಬಿಡಲಾಗಿತ್ತು. ಇದು ಸಚಿವರಿಗೆ ಮಾಡಿದ ಅವಮಾನ. ವೈಯಕ್ತಿಕ ದ್ವೇಷ ಮತ್ತು ರಾಜಕೀಯ ವೈಷಮ್ಯದಿಂದ ಕೇಂದ್ರ ಸರ್ಕಾರ ಹೀಗೆ ಮಾಡಿದೆ’ ಎಂದು ಆರೋಪಿಸಿದರು.
‘ಘಟನೆಯ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಸುನೀಲ್ ಕೋಠಿ, ರಾಹುಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.