ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ರವಿವಾರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಹಮ್ಮಿಕೊಂಡ ಜಲ ಜೀವನ ಮಿಷನ್ ಕಾಮಗಾರಿಗೆ ಶಾಸಕ ಎಂ.ವೈ.ಪಾಟೀಲ್ ಅಡಿಗಲ್ಲು ನೆರವೇರಿಸಿದರು.
ಅಫಜಲಪುರ:‘ನಾರಾಯಣಪುರ ಜಲಾಶಯದಿಂದ ಪೈಪ್‌ಲೈನ್ ಮೂಲಕ ಭೀಮಾನದಿಗೆ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಎಂ.ವೈ. ಪಾಟೀಲ ಭರವಸೆ ನೀಡಿದರು.
ಸಮೀಪದ ಮಾಶಾಳ ಗ್ರಾಮದಲ್ಲಿ ಭಾನುವಾರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಲ ಜೀವನ ಮಿಷನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಭೀಮಾ ನದಿಯಲ್ಲಿ ವರ್ಷದಲ್ಲಿ ನಾಲ್ಕು ತಿಂಗಳು ನೀರಿರುವುದಿಲ್ಲ. ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೋಟ್ಯಂತರ ಹಣ ವ್ಯಯಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಅನುದಾನವನ್ನು ಸರಿಯಾಗಿ ಬಳಸಿ, ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಕುಡಿಯುವ ನೀರು ಯೋಜನೆ ಕಾಮಗಾರಿಗಳು ನಿರೀಕ್ಷಿಸಿದಂತೆ ನಡೆದಿಲ್ಲ’ ಎಂದರು.
ಸುಮಾರು₹ 4.8 ಕೋಟಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಆರಂಭಿಸಲಾಗುತ್ತಿದೆ. ಜನರು ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಗುತ್ತಿಗೆದಾರರಿಗೆ ಸಹಕರಿಸಬೇಕು. ಕಾಮಗಾರಿ ನಿರ್ಮಾಣ ಕಾರ್ಯದಲ್ಲಿ ಒಡೆದ ರಸ್ತೆಯನ್ನು ಮರು ದುರಸ್ತಿ ಮಾಡಬೇಕು. ಮಾಶಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗುತ್ತಿರುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ತಾಲ್ಲೂಕಿನಲ್ಲಿ ದೊಡ್ಡ ಗ್ರಾಮ ಮಾಶಾಳಕ್ಕೆ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
‘ಪ್ರತಿಯೊಬ್ಬರೂ, ಸರ್ಕಾರ ನೀಡುತ್ತಿರುವ ಸಹಾಯಧನ ಬಳಸಿ, ಶೌಚಾಲಯ ನಿರ್ಮಿಸಿಕೊಳ್ಳಬೇಕು. ನರೇಗಾ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅನುದಾನವಿದೆ. ರೈತರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ನರೇಗಾ, ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜತೆಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷೆ ರಾಣುಬಾಯಿ ಚವ್ಹಾಣ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿಸಾಹುಕಾರ, ಬಾಬಾಸಾಹೇಬಗೌಡ ಪಾಟೀಲ, ಟಿಎಪಿಸಿಎಂಎಸ್ ನಿರ್ದೇಶಕ ಶಿವು ಪ್ಯಾಟಿ, ನಿಂಗಪ್ಪ ಪಾಟೋಳಿ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜ್ಞಾನೇಶ್ವರಿ ಪಾಟೀಲ, ಅಭಿಷೇಕ ಪಾಟೀಲ, ರಾಜಕುಮಾರ ಬಬಲಾದ, ಶರಣು ಈಶ್ವರಗೊಂಡ, ಶಿವರುದ್ರಪ್ಪ ಅವಟೆ, ಚವಡಪ್ಪ ಸಣ್ಣತಂಗಿ, ಗುರುಶಾಂತಯ್ಯ ಜಳಕಿಮಠ, ಜಗದೀಶ, ಮರೆಪ್ಪ ಮುಗುಳಿ, ಉಮೇಶ ಅವಣೆ, ಮನೋಜ ರಾಠೋಡ, ದತ್ತು ವಗ್ಗೆ, ಪಾಪಣ್ಣ ಸಿಂಗೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.