ADVERTISEMENT

ಕನ್ಹಯ್ಯ ಉಪನ್ಯಾಸ ರದ್ದುಗೊಳಿಸಿದ ಕ್ರಮ ಖಂಡಿಸಿ ಪ್ರತಿಭಟನೆ

ರಸ್ತೆ ತಡೆ ನಡೆಸಿದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 11:57 IST
Last Updated 16 ಅಕ್ಟೋಬರ್ 2019, 11:57 IST
ಗುಲಬರ್ಗಾ ವಿ.ವಿ.ಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ಹಯ್ಯಕುಮಾರ್‌ ಉಪನ್ಯಾಸವನ್ನು ರದ್ದುಗೊಳಿಸಲು ಒತ್ತಡ ಹೇರಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದರು
ಗುಲಬರ್ಗಾ ವಿ.ವಿ.ಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ಹಯ್ಯಕುಮಾರ್‌ ಉಪನ್ಯಾಸವನ್ನು ರದ್ದುಗೊಳಿಸಲು ಒತ್ತಡ ಹೇರಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಅನುಮತಿ ನೀಡಿದ ಬಳಿಕವೂ ರಾಜ್ಯ ಸರ್ಕಾರ ಹಸ್ತಕ್ಷೇಪ ನಡೆಸಿ ಸಿಪಿಐ ಮುಖಂಡ ಕನ್ಹಯ್ಯಕುಮಾರ್‌ ಉಪನ್ಯಾಸ ಕಾರ್ಯಕ್ರಮ ರದ್ದುಗೊಳಿಸಿದೆ ಎಂದು ಆರೋಪಿಸಿ ರಿಪಬ್ಲಿಕನ್‌ ಯೂಥ್‌ ಫೆಡರೇಶನ್‌ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.‌

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರಿನ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಪೊಲೀಸರು ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ದಿನೇಶ ದೊಡ್ಡಮನಿ, ‘ಕನ್ಹಯ್ಯಕುಮಾರ್‌ ಮಾತನಾಡುವುದನ್ನು ತಪ್ಪಿಸಲು ನೇರವಾಗಿ ರಾಜ್ಯಪಾಲರ ಕಚೇರಿ ಹಾಗೂ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಿದೆ. ಆ ಮೂಲಕ ಶೈಕ್ಷಣಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸಿದೆ’ ಎಂದು ಟೀಕಿಸಿದರು.

ADVERTISEMENT

‘ದೇಶದಲ್ಲಿನ ಆರ್ಥಿಕತೆ, ನಿರುದ್ಯೋಗ, ರೈತರ ಕೂಲಿ ಕಾರ್ಮಿಕರ, ಸಂಸ್ಕೃತಿಯ, ಸಹೋದರತೆ ಹಾಗೂ ಭಾತೃತ್ವದ ಬಗ್ಗೆ ಮಾತನಾಡುವ ಕನ್ಹಯ್ಯಕುಮಾರ್‌ ದೇಶ ಒಡೆಯುವ, ದೇಶದ್ರೋಹದ ಬಗ್ಗೆ ಎಂದೂ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ದೇಶದ ತುಂಬೆಲ್ಲ ಯುವಕರಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದಾರೆ. ಅಂತಹ ವ್ಯಕ್ತಿಯ ಭಾಷಣ ಕೇಳುವ ಅವಕಾಶವನ್ನು ರಾಜ್ಯ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಂದ ಕಿತ್ತುಕೊಂಡಿದೆ. ವಿ.ವಿ.ಯಲ್ಲಿ ನಿಷೇಧಾಜ್ಞೆ ವಿಧಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭೀತಿಯ ವಾತಾವರಣವನ್ನು ಹುಟ್ಟುಹಾಕಿದ್ದಕ್ಕೆ ಕಾರಣವಾದ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌, ಎಬಿವಿಪಿ ಸಂಘಟನೆಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಫೆಡರೇಶನ್‌ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಇಟ್ಟಗಿ, ಮುಖಂಡರಾದ ಸಂತೋಷ ಮೇಲ್ಮನಿ, ಮಿಲಿಂದ ಸನಗೂಂದಿ, ಸತೀಶ ಮಾಲೆ, ದಿನೇಶ ದೊಡ್ಡಮನಿ, ರುಕ್ಮೇಶ ಭಂಡಾರಿ, ನಾಗೇಂದ್ರ ಜವಳೆ, ರವಿ ಡೋಣಿ, ಅಂಬರೀಶ ಅಂಬಲಗಿ, ಅಜಯ ಕೋರಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.