ADVERTISEMENT

ಕಲಬುರಗಿ: ಸಿಎಎ ವಿರೋಧಿಸಿ ಸೌಹಾರ್ದ ವೇದಿಕೆ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ಜನಾಂಗೀಯ ದ್ವೇಷ ಬಿತ್ತುವ ಹಿಟ್ಲರ್‌ ಸಿದ್ಧಾಂತ ಅನುಷ್ಠಾನ: ಟೀಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 9:56 IST
Last Updated 18 ಜನವರಿ 2020, 9:56 IST
ಸಿಎಎ ವಿರೋಧಿಸಿ ಸೌಹಾರ್ದ ಭಾರತ ವೇದಿಕೆ ಸದಸ್ಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸಿಎಎ ವಿರೋಧಿಸಿ ಸೌಹಾರ್ದ ಭಾರತ ವೇದಿಕೆ ಸದಸ್ಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಸೌಹಾರ್ದ ಭಾರತ ವೇದಿಕೆ ಸದಸ್ಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಂದು ದೇಶದಲ್ಲಿ ಬಡತನ ತೀವ್ರಗೊಂಡಿದ್ದು, ಜಿಡಿಪಿಯು 4.5ಕ್ಕೆ ಕುಸಿದಿದೆ. ನಿರುದ್ಯೋಗ ಭಯಾನಕವಾಗಿ ಬೆಳೆದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವೇ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು, ರೈಲ್ವೆಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ದೇಶದ ನೆಲ, ಜಲ ಸಂಪತ್ತನ್ನೆಲ್ಲ ಕಾರ್ಪೊರೇಟ್‌ ಕುಳಗಳ ಮಡಿಲಿಗೆ ಸುರಿಯಲಾಗುತ್ತಿದೆ. ಇದರಿಂದ ಇನ್ನಷ್ಟು ಬಡತನ ಸೃಷ್ಟಿಯಾಗುತ್ತಿದೆ. ದೇಶದ ಆರ್ಥಿಕತೆ ಸಂಪೂರ್ಣ ದಿವಾಳಿಯಾಗಿದೆ. ಇದನ್ನು ಮರೆಮಾಚಲೆಂದೇ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದೆ. ಮೊಟ್ಟಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಸಿಎಎ ಕಾಯ್ದೆ ಬಂದಿದ್ದು, ದೇಶದಲ್ಲಿ ಕೋಮುವಾದಕ್ಕೆ ದಾರಿ ಮಾಡಿಕೊಡುವ ದುರುದ್ದೇಶ ಹೊಂದಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಇದು ಸಂವಿಧಾನದ ಮೇಲಿನ ದಾಳಿಯಾಗಿದ್ದು, ಜನಾಂಗೀಯ ದ್ವೇಷವನ್ನು ಬಿತ್ತುವ ಹಿಟ್ಲರ್‌ ಸಿದ್ಧಾಂತವನ್ನು ಒಳಗೊಂಡಿದೆ. ಮುಸ್ಲಿಂ ಸಮುದಾಯ ಮಾತ್ರವಲ್ಲ ಎನ್‌ಪಿಆರ್‌ ಮೂಲಕ ಪೌರತ್ವ ದಾಖಲಾತಿಗಳನ್ನು ಸಂಗ್ರಹಿಸುವ ಮತ್ತು ದಾಖಲೆ ಇಲ್ಲದಿದ್ದಲ್ಲಿ ಸಂಶಯಾಸ್ಪದ ವ್ಯಕ್ತಿ ಎಂದು ಪರಿಗಣಿಸಿ ಬಂಧನ ಕೇಂದ್ರಗಳಿಗೆ ಜನರನ್ನು ಸಾಗಿಸಲಾಗುತ್ತದೆ. ಇವೆಲ್ಲ ಪ್ರಕ್ರಿಯೆಗಳು ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿವೆ. ಬಡತನ, ನಿರುದ್ಯೋಗ ನಿವಾರಣೆ ಮಾಡುವುದನ್ನು ಬಿಟ್ಟು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ಸೌಹಾರ್ದ ವೇದಿಕೆಯ ಸಂಚಾಲಕಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈಗಾಗಲೇ ದೇಶದಲ್ಲಿನ ಆದಿವಾಸಿ, ಅಲೆಮಾರಿ, ಲೈಂಗಿಕ ಅಲ್ಪಸಂಖ್ಯಾತರು, ದಲಿತ, ಹಿಂದುಳಿದ ಜನ ಸಮುದಾಯವು ಬಡನದಲ್ಲಿದ್ದು, ಅನಕ್ಷರತೆ ನಿರುದ್ಯೋಗ ಭಯಾನಕವಾಗಿದೆ. ಜನನ ಮರಣ ದಾಖಲಾತಿಗಳಿಲ್ಲದ ಬದುಕು ಇವರದಾಗಿದೆ. ಇಲ್ಲದ ದಾಖಲೆಗಳನ್ನು ಎಲ್ಲಿಂದ ತಂದುಕೊಡಬೇಕು ಎಂದು ಪ್ರಶ್ನಿಸಿದರು.

ಆರ್‌.ಕೆ.ಹುಡಗಿ, ಗಂಗಾಧರ ಮಾಡಬೂಳ, ಶಶಿಕಲಾ ಬೆಳಗಲಿ, ಮಹೇಶಕುಮಾರ ರಾಠೋಡ, ಶ್ರೀಮಂತ ಬಿರಾದಾರ, ಚಂದು ಜಾಧವ, ಸ್ನೇಹ ಸೊಸೈಟಿ ರಾಜ್ಯ ಘಟಕದ ಅಧ್ಯಕ್ಷ ಮೌನೇಶ, ಮನೀಷಾ ಹಾಗೂ ಹಲವು ಲೈಂಗಿಕ ಅಲ್ಪಸಂಖ್ಯಾತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.