ADVERTISEMENT

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಯಿರಿ: ಯಶವಂತ ಬೊಮ್ನಳ್ಳಿ

ಶ್ರಮಜೀವಿಗಳ ವೇದಿಕೆ ವತಿಯಿಂದ ಅಬಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:20 IST
Last Updated 17 ಜೂನ್ 2022, 16:20 IST
ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಶ್ರಮಜೀವಿಗಳ ವೇದಿಕೆ ಸದಸ್ಯರು ಕಲಬುರಗಿಯ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಶ್ರಮಜೀವಿಗಳ ವೇದಿಕೆ ಸದಸ್ಯರು ಕಲಬುರಗಿಯ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಮನೆಗಳಲ್ಲಿ ಜಗಳ ಉಂಟಾಗುತ್ತಿವೆ. ಯುವಕರು, ಬಡವರು ಮದ್ಯದ ದಾಸರಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಅಬಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷಅಧ್ಯಕ್ಷ ಚಂದ್ರಶೇಖರ ಹಿರೇಮಠ, ವಿವಿಧ ಗ್ರಾಮಗಳಲ್ಲಿ ಲೈಸೆನ್ಸ್ ಇಲ್ಲದೆ ವಿವಿಧ ಕಿರಾಣಿ ಅಂಗಡಿ, ಹೋಟೆಲ್, ಪಾನ್ ಶಾಪ್, ಮನೆಗಳಲ್ಲಿ ನಿರಂತರವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇಂಥ ಸುಮಾರು 450 ಅಂಗಡಿಗಳಿವೆ. ಇಲ್ಲಿ ಹಗಲು ರಾತ್ರಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಸಮಾಜದಲ್ಲಿ ಅಭದ್ರತೆ ಉಂಟಾಗುತ್ತಿದೆ. ಇದರಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಆಗುತ್ತಿದೆ. ಕೂಡಲೇ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಕ್ರಮ ಮದ್ಯ ಮಾರಾಟಗಾರರನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಿದರು.

‘ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಅಕ್ರಮ ಮಾರಾಟಗಾರರ ಕೈಗೊಂಬೆಯಾಗಿದ್ದು, ಜಿಲ್ಲೆಯಿಂದ ವಿಶೇಷ ತಂಡ ಕಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈ ಮೊದಲು ನಮ್ಮ ಸಂಘಟನೆಯಿಂದ ತಾಲ್ಲೂಕಿನ ಹತ್ತಾರು ಗ್ರಾಮಗಳನ್ನು ಮದ್ಯ ಮುಕ್ತ ಮಾಡಲಾಗಿತ್ತು. ಹಲವು ಗ್ರಾಮಗಳಲ್ಲಿ ಮದ್ಯ ಮಾರಾಟ ನಿಲ್ಲಿಸಲಾಗಿತ್ತು. ಇತ್ತೀಚೆಗೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹೋರಾಟ ಸ್ಥಗಿತಗೊಳಿಸಿದಾಗ ಮತ್ತೆ ಮದ್ಯಮಾರಾಟ ಹೆಚ್ಚಾಗಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅಬಕಾರಿ ಇಲಾಖೆ ಅಧಿಕಾರಿ ಇಸ್ಮಾಯಿಲ್ ಇನಾಮದಾರ ಮನವಿ ಸ್ವೀಕರಿಸಿದರು. 10 ದಿನಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆಮತ್ತೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಯಶವಂತ ಬೊಮ್ನಳ್ಳಿ, ಹಣಮಂತರಾವ್ ಪಾಟೀಲ, ವಿಠ್ಠಲ ನಾಡಗೇರಿ, ಭೀಮಶಾ ಚಿತ್ತಲಿ, ಶರಣಮ್ಮ ಮುಗಳಿ, ಮಹಾಂತವ್ವ ಮೇಲಿನಕೇರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.