ADVERTISEMENT

ಕಲಬುರ್ಗಿ: ಮುಷ್ಕರ ಅಂತ್ಯ- ರಸ್ತೆಗಿಳಿದ ಬಸ್‌ಗಳು

ಈಶಾನ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಸಂಜೆಯವರೆಗೆ ಶೇ 73ರೆಷ್ಟು ಬಸ್‌ಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 14:39 IST
Last Updated 21 ಏಪ್ರಿಲ್ 2021, 14:39 IST
ಸಾರಿಗೆ ಸಂಸ್ಥೆ ನೌಕರರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದರಿಂದ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹೆಚ್ಚಿನ ಸಂಖ್ಯೆಯ ಬಸ್‌ಗಳು ಕಂಡು ಬಂದವು
ಸಾರಿಗೆ ಸಂಸ್ಥೆ ನೌಕರರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದರಿಂದ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹೆಚ್ಚಿನ ಸಂಖ್ಯೆಯ ಬಸ್‌ಗಳು ಕಂಡು ಬಂದವು   

ಕಲಬುರ್ಗಿ: ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ ಎಂಬ ಕರ್ನಾಟಕ ಹೈಕೋರ್ಟ್‌ ಸೂಚನೆ ಬಳಿಕ ಸಾರಿಗೆ ಸಂಸ್ಥೆ ನೌಕರರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಬುಧವಾರ ಸಂಜೆಯವರೆಗೆ ಶೇ 73ರಷ್ಟು ಬಸ್‌ಗಳು ಕಾರ್ಯಾಚರಣೆ ನಡೆಸಿದವು.

2535 ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಬೇಕಿತ್ತು. ಸಂಜೆಯವರೆಗೆ 1859 ರೂಟ್‌ಗಳಲ್ಲಿ ಬಸ್ ಸಂಚಾರ ನಡೆಯಿತು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮಾರಾವ್ ತಿಳಿಸಿದ್ದಾರೆ. ಮುಷ್ಕರ ಹಿಂದಕ್ಕೆ ಪಡೆದಿದ್ದರಿಂದ ಸಹಜವಾಗಿಯೇ ಖಾಸಗಿ ಬಸ್‌ ಮಾಲೀಕರು ತಮ್ಮ ಸೇವೆಯನ್ನು ವಾಪಸ್ ಪಡೆದಿದ್ದು, ಬಸ್‌ ನಿಲ್ದಾಣಗಳಿಂದ ತಮ್ಮ ವಾಹನಗಳನ್ನು ಬೇರೆಡೆ ಸ್ಥಳಾಂತರಿಸಿದರು. 14 ದಿನಗಳಿಂದ ಬಸ್‌ಗಳಿಲ್ಲದೇ ಪರದಾಡುತ್ತಿದ್ದ ಪ್ರಯಾಣಿಕರು ನಿರಾಳತೆಯಿಂದ ತಮ್ಮ ಊರುಗಳಿಗೆ ತೆರಳಿದರು. ಕಲಬುರ್ಗಿ ನಗರ ಸಾರಿಗೆಯೂ ಬಹುತೇಕ ಆರಂಭಗೊಂಡಿದ್ದರಿಂದ ಉದ್ಯೋಗಿಗಳು, ಶಾಲಾ ವಿದ್ಯಾರ್ಥಿಗಳಿಂದ ಬಸ್‌ಗಳು ತುಂಬಿದ್ದವು.

9 ಜನರ ಬಂಧನ: ಕರ್ತವ್ಯಕ್ಕೆ ಅಡ್ಡಿ, ಸಾಮಾಜಿಕ ಜಾಲತಾಣಗಳ ಮೂಲಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ತೆರಳದಂತೆ ಪ್ರಚೋದಿಸಿದ ಆರೋಪದ ಮೇರೆಗೆ ಪೊಲೀಸರು 62 ಸಿಬ್ಬಂದಿ ವಿರುದ್ಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅವರ ಪೈಕಿ 9 ಜನರನ್ನು ಬಂಧಿಸಿದ್ದಾರೆ.

ADVERTISEMENT

ಮಂಗಳವಾರ ವಿಜಯಪುರ ಜಿಲ್ಲೆಯ ತಾಳಿಕೋಟಿ–ಚಿಪಳೂಣ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ತಡೆದು ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕಲಕೇರಿ ಠಾಣೆ ಪೊಲೀಸರು ಚಾಲಕ ಕಂ ನಿರ್ವಾಹಕರಾದ ಮಹಾಂತಪ್ಪ, ಆರ್‌.ಎಸ್‌. ಗೋಲಗೇರಿ ಎಂಬುವರನ್ನು ಬಂಧಿಸಿದ್ದಾರೆ.

ಮತ್ತೆ ನಾಲ್ವರ ವಜಾ: ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾದ ಕಲಬುರ್ಗಿ ವಿಭಾಗ–1ರ ಚಾಲಕ ಕಂ ನಿರ್ವಾಹಕ, ಕಲಬುರ್ಗಿ ವಿಭಾಗ–2ರ ಚಾಲಕ, ಯಾದಗಿರಿ ವಿಭಾಗದ ಚಾಲಕಂ ಕಂ ನಿರ್ವಾಹಕ, ಬಳ್ಳಾರಿ ವಿಭಾಗದ ಚಾಲಕ ಸೇರಿ ನಾಲ್ವರು ಸಿಬ್ಬಂದಿಯನ್ನು ಬುಧವಾರ ವಜಾ ಮಾಡಲಾಗಿದೆ. ಇದರೊಂದಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 77 ಸಿಬ್ಬಂದಿಯನ್ನು ವಜಾ ಮಾಡಿದಂತಾಗಿದೆ. 46 ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ವಜಾ ಆದವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಯಾವುದೇ ಚಿಂತನೆ ಸಂಸ್ಥೆಯ ಮುಂದೆ ಇಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮಾರಾವ್ ಸ್ಪಷ್ಟಪಡಿಸಿದ್ದಾರೆ.

ಕಳೆದ 14 ದಿನಗಳ ಮುಷ್ಕರದಿಂದಾಗಿ ಸಂಸ್ಥೆಯ ₹ 73.50 ಕೋಟಿ ವರಮಾನದಲ್ಲಿ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.