ADVERTISEMENT

ಬೆಳೆನಷ್ಟ ಪರಿಹಾರ ನೀಡಲು ಆಗ್ರಹ

ಎಸ್‌ಯುಸಿಐ, ರೈತ– ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 15:43 IST
Last Updated 6 ಆಗಸ್ಟ್ 2021, 15:43 IST
ಎಸ್‌ಯುಸಿಐ ಹಾಗೂ ರೈತ– ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಎಸ್‌ಯುಸಿಐ ಹಾಗೂ ರೈತ– ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಜಿಲ್ಲೆಯಲ್ಲಿ ಅತಿವೃಷ್ಟಿ ಕಾರಣ ಉಂಟಾದ ಹಾನಿಗೆ ಶೀಘ್ರ ಪರಿಹಾರ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐ ಹಾಗೂ ರೈತ– ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಎರಡೂ ಸಂಘಟನೆಗಳ ಕಾರ್ಯಕರ್ತರು, ಬೆಳೆ ನಷ್ಟದ ವರದಿಯನ್ನು ಶೀಘ್ರ ಪೂರ್ಣಗೊಳಿಸಿ ಪರಿಹಾರ ನೀಡಬೇಕು. ಉಚಿತವಾಗಿ ಬೀಜ, ಗೊಬ್ಬರ, ರಸಾಯನಿಕಗಳನ್ನು ನೀಡಬೇಕು ಎಂದು ಘೋಷಣೆ ಕೂಗಿದರು.

ಕೊರೊನಾ, ಲಾಕ್‌ಡೌನ್ ಹಾಗೂ ಇನ್ನಿತರ ಕಠಿಣ ಕ್ರಮಗಳಿಂದಾಗಿ ರೈತರ ಬೆಳೆಗಳು ಮಾರಾಟವಾಗದೆ ಅತ್ಯಂತ ಕನಿಷ್ಠ ದರದಲ್ಲಿ ಮಾರಾಟವಾದವು. ಆಗ ಎಪಿಎಂಸಿ ಹಾಗೂ ಅಡತಿಗಳು ಕಡಿಮೆ ಬೆಲೆಯಲ್ಲಿ ಬೆಳೆಗಳನ್ನು ಕೊಂಡು ಲಾಭ ಮಾಡಿಕೊಂಡರು. ಕಳೆದ ವರ್ಷ ಕೂಡ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಕೊರೊನಾ ಜತೆಗೇ ಅತಿವೃಷ್ಟಿಯ ಹೊಡೆತವೂ ಬಿದ್ದಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ವಿಮಾ ಕಂಪನಿಗಳು ರೈತರಿಂದ ಬೆಳೆಮಿಮೆ ಮಾಡಿಸಿಕೊಂಡು ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಸಹಾಯ ಮಾಡುತ್ತಿವೆ. ಹೀಗೆ ಹಲವಾರು ವಿಮಾ ಕಂಪನಿಗಳು ರೈತರನ್ನು ಲೂಟಿ ಹೊಡೆಯುತ್ತಿವೆ. ಅಂತಿಮವಾಗಿ, ವಿಮೆಯಿಂದ ಕಂಪನಿಗಳಿಗೆ ಲಾಭವಾಗಿದೆಯೇ ಹೊರತು ರೈತನಿಗೆ ಇದರಿಂದ ಯಾವ ಪ್ರಯೋಜನೆಯೂ ಆಗಿಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತವು ರೈತರನ್ನು ಮೋಸ ಮಾಡುತ್ತಿರುವ ಕಂಪನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ರೈತ– ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಕೆ. ಮಾನೆ, ಎಸ್‌ಯುಸಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ವಿ. ದಿವಾಕರ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.