ADVERTISEMENT

ವಿವಿಧ ಬೇಡಿಕೆ; ನಗರದಲ್ಲಿ ಸರಣಿ ಪ್ರತಿಭಟನೆ

ಪೆಟ್ರೋಲಿಯಂ ಉತ್ಪನ್ನಗಳ ಸುಂಕ ಏರಿಕೆ; ಕೇಂದ್ರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 13:39 IST
Last Updated 22 ಜೂನ್ 2020, 13:39 IST
ಕಲಬುರ್ಗಿಯಲ್ಲಿ ಸೋಮವಾರ ವಕೀಲರು ಪ್ರತಿಭಟನೆ ನಡೆಸಿದರು
ಕಲಬುರ್ಗಿಯಲ್ಲಿ ಸೋಮವಾರ ವಕೀಲರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದಲ್ಲಿ ಸೋಮವಾರ ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಸರಣಿ ಪ್ರತಿಭಟನೆ ನಡೆಸಿದವು.

ವಿದ್ಯುತ್‌ ಬಿಲ್‌ ಮನ್ನಾಗೆ ಆಗ್ರಹ

ಜಿಲ್ಲೆಯ ಗೃಹ ಬಳಕೆದಾರರು ಹಾಗೂ ಸಣ್ಣ ವಾಣಿಜ್ಯ ಮಳಿಗೆದಾರರ ಲಾಕ್‍ಡೌನ್ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಮಾಡಲಾಯಿತು.

ADVERTISEMENT

ಪಕ್ಷದ ಯುವ ಘಟಕದ ಅಧ್ಯಕ್ಷ ಎಚ್‌.ಡಿ ಅಲೀಂ ಇನಾಂದಾರ ಮಾತನಾಡಿ, ‘ಸರ್ಕಾರ ದೊಡ್ಡ ಕಾರ್ಖಾನೆ ಹಾಗೂ ಕಂಪನಿಗಳ ವಿದ್ಯುತ್ ಬಿಲ್ ಮಾಡಿದೆ. ಆದರೆ ಬಡ– ಮಧ್ಯಮ ವರ್ಗದವನ್ನು ಕಡೆಗಣಿಸಿದೆ. ಕೆಲಸವಿಲ್ಲದೆ ಬದುಕಲು ಕಷ್ಟ ಅನುಭವಿಸುವ ಜನರಿಂದ ವಿದ್ಯುತ್ ಬಿಲ್ ವಸೂಲಿ ಮಾಡುವುದು ಸಮಂಜಸವಲ್ಲ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶೇಖ್‌ ಮೋಹಿನುದ್ದೀನ್, ನಾಸಿರ್ ಹುಸೇನ್ ಉಸ್ತಾದ್, ಕೃಷ್ಣ ರೆಡ್ಡಿ, ಉಸ್ಮಾನ್ ಗುತ್ತೇದಾರ, ಶಿವಾಜಿ, ಮೆಹಬೂಬ್, ಮಲೀಕ್, ಅಬೂಬಕರ್, ಮನೋಹರ ಪೋದ್ಧಾರ್, ಶಾಮರಾವ್ ಸೂರನ್ ನೇತೃತ್ವ ವಹಿಸಿದ್ದರು.

‘ವಕೀಲರಿಗೆ ವಿಶೇಷ ಪ್ಯಾಕೇಜ್ ನೀಡಿ’

ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಎಲ್ಲ ವಕೀಲರನ್ನು ಒಳಗೊಳ್ಳುವಂತೆ ₹ 45 ಕೋಟಿಯ ನೆರವಿನ ಪ್ಯಾಕೇಜ್‌ ಘೋಷಿಸಬೇಕು ಎಂದು ಗುಲಬರ್ಗ ನ್ಯಾಯವಾದಿಗಳ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವೃತ್ತಿ ನಿರತ ವಕೀಲರಿಗಾಗಿ ಸರ್ಕಾರ ಈಗಾಗಲೇ ₹ 5 ಕೋಟಿಯ ನೆರವಿನ ಪ್ಯಾಕೇಜ್‌ ನೀಡಿದೆ. ನ್ಯಾಯಾಲಯ ಕಲಾಪಗಳು ಸ್ಥಗಿತಗೊಂಡ ಕಾರಣ ಸುಮಾರು 1 ಲಕ್ಷದಷ್ಟು ವಕೀಲರು ಆದಾಯ ವಂಚಿತರಾಗಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹ 10 ಕೋಟಿ ಹೆಚ್ಚುವರಿ ಪ್ಯಾಕೇಜ್ ನೀಡಿ ಕೋರಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಸಿ. ಪಸ್ತಾಪೂರ, ಸಂತೋಷ ಬಿ. ಪಾಟೀಲ, ಶಿವಾನಂದ ಬಿ, ಹೆಡೆ, ಶ್ರೀನಿವಾಸ ಕಡಾದಿ, ಅಂಬರೀಶ ಉಡಚಣ, ಬಿ.ಎನ್. ಪಾಟೀಲ, ನಾಗೇಂದ್ರ ಪೂಜಾರಿ ನೇತೃತ್ವ ವಹಿಸಿದ್ದರು.

ಸುಂಕ ಹೆಚ್ಚಳಕ್ಕೆ ಖಂಟನೆ‌

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸುವ ಕ್ರಮ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಮುಖಂಡರು ಪ್ರತಿಭಟನೆ ನಡೆಸಿದರು.

ಈ ನಿರ್ಧಾರವು ಬಡ ಹಾಗೂ ಮಧ್ಯಮ ವರ್ಗಕ್ಕೆ ಭಾರೀ ಹೊಡೆತ ನೀಡಲಿದೆ. ಕೂಡಲೇ ತೀರ್ಮಾನದಿಂದ ಹಿಂದೆ ಸರಿಯಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದೆ. ಅದರ ಪ್ರಕಾರ ದೇಶದಲ್ಲೂ ದರವು ಲೀಟರ್‌ಗೆ ₹ 25ರಿಂದ ₹ 30 ಇರಬೇಕಿತ್ತು. ಆದರೆ, ಕೇಂದ್ರ ಸರ್ಕಾರ ದರ ಏರಿಕೆ ಮಾಡಿದೆ. ಈ ಮೂಲಕ ಮಧ್ಯಮ ವರ್ಗದವರನ್ನು ಬಲಿ ಹಾಕಲು ಹೊರಟಿದೆ’ ಎಂದೂ ಆಕ್ರೋಶ ಹೊರಹಾಕಿದರು.

ಡೀಸೆಲ್ ಬೆಲೆ ಏರಿಕೆ ಪರಿಣಾಮದಿಂದ ಬಸ್, ರೈಲ್ವೆ ಪ್ರಯಾಣ ದರವೂ ಏರಿಕೆಯಾಗಲಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನೌಕರರಿಗೆ ಅನೇಕ ಕಂಪೆನಿಗಳು ಅರ್ಧ ಸಂಬಳ ಮಾತ್ರ ನೀಡುತ್ತಿವೆ. ಬಹುತೇಕ ರೈತರು ಟ್ರ್ಯಾಕ್ಟರ್, ಟಿಲ್ಲರ್ ಮುಂತಾದ ಉಪಕರಣ ಬಳಸಿ ಕೃಷಿ ಮಾಡುತ್ತಿದ್ದಾರೆ. ಅವರಿಗೂ ಇದು ಹೊರೆಯಾಗಲಿದೆ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಅಬ್ದುಲ್ ಬಾರಿ, ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಚಿತಾಪುರ, ವಿಭಾಗಿಯ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಬೀನ್ ಅಹ್ಮದ್ ನೇತೃತ್ವ ವಹಿಸಿದ್ದರು.

ಸಿಪಿಎಂ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ, ಸಿಪಿಎಂ ಜಿಲ್ಲಾ ಘಟಕದ ಮುಖಂಡರು ಖಂಡಿಸಿದ್ದಾರೆ.

ಬಡ, ಮಧ್ಯಮ ವರ್ಗದ ಕಾರ್ಮಿಕರು, ಸಣ್ಣ ಉದ್ದಿಮೆದಾರರಿಕೆ ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಪರಿಸ್ಥಿಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ ನಿರ್ಧಾರ ಮಾಡಿದ್ದು ನಾಚಿಕಗೇಡಿನ ಸಂಗತಿ. ಇಡೀ ದೇಶದಲ್ಲಿ ಶ್ರೀಮಂತರು ಮಾತ್ರ ಬದುಕುವಂಥ ‍ಪರಿಸ್ಥಿತಿಯನ್ನು ಮೋದಿ ತಂದಿಟ್ಟಿದ್ದಾರೆ ಎಂದು ಪಕ್ಷದ ಜಿಲ್ಲಾ ಸಮಿತಿ ದೂರಿದೆ.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಎಂ. ಕಲಬುರ್ಗಿ, ಅಶೋಕ ಮ್ಯಾಗೆರಿ, ಮೇಘರಾಜ ಕಠಾರೆ, ಅಲ್ತಾಫ್ ಇನಾಮದಾರ, ಗುರುನಂದೇಶ ಕೋಣಿನ್, ಎಂ.ಬಿ.ಸಜ್ಜನ್, ಆನಂದ ಎನ್.ಜೆ. ಭುಟ್ಟೊ ಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.