ADVERTISEMENT

25ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ತಳವಾರ– ಪರಿವಾರ ಸಮುದಾಯಕ್ಕೆ ಎಸ್‌.ಟಿ ಪ್ರಮಾಣ ಪತ್ರ; ಸರ್ದಾರ್‌ ರಾಯಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 12:41 IST
Last Updated 21 ನವೆಂಬರ್ 2020, 12:41 IST
ತಳವಾರ, ಪರಿವಾರ ಸಮುದಾಯಕ್ಕೆ ಎಸ್‌.ಟಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಕಲಬುರ್ಗಿಯಲ್ಲಿ ಆಯೋಜಿಸಿದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಸರ್ದಾರ್‌ ರಾಯಪ್ಪ ಮಾತನಾಡಿದರು
ತಳವಾರ, ಪರಿವಾರ ಸಮುದಾಯಕ್ಕೆ ಎಸ್‌.ಟಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಕಲಬುರ್ಗಿಯಲ್ಲಿ ಆಯೋಜಿಸಿದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಸರ್ದಾರ್‌ ರಾಯಪ್ಪ ಮಾತನಾಡಿದರು   

ಕಲಬುರ್ಗಿ: ‘ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಯ ಪ್ರಕಾರ ತಳವಾರ– ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ನ. 25ರಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸರ್ದಾರ್‌ ರಾಯಪ್ಪ ತಿಳಿದರು.

ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ 88ನೇ ದಿನದ ಧರಣಿ ಹಾಗೂ 73ನೇ ದಿನದ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯಪತ್ರ ಪ್ರಕಾರ ತಳವಾರ, ಪರಿವಾರದ ಜನರಿಗೆ ಎಸ್.ಟಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಆದರೆ, ತಹಶೀಲ್ದಾರರನ್ನು ಕೇಳಿದರೆ ಅವರು ಜಿಲ್ಲಾಧಿಕಾರಿಗಳಿಂದ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದಿಂದ ಆಗಸ್ಟ್‌ 31ರಂದೇ ಕೊನೆಯ ಆದೇಶ ಬಂದಿದೆ. ಆದರೆ, ಇಲ್ಲಿಯವರೆಗೂ ಪ್ರದೇಶಿಕ ಆಯುಕ್ತರು ಅಥವಾ ಜಿಲ್ಲಾಧಿಕಾರಿ ನಮಗೆ ಎಸ್.ಟಿ ಪ್ರಮಾಣ ಪತ್ರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ADVERTISEMENT

ದಿನಕ್ಕೊಂದು ಸುತ್ತೋಲೆ ಹೊರಡಿಸುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳ ಮೇಲಾಟದಿಂದ ರಾಜ್ಯದಾದ್ಯಂತ ತಳವಾರ, ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸಿಗದೇ ವಂಚಿತರಾಗುತ್ತಿದ್ದಾರೆ. ಶಿಕ್ಷಣ, ನೌಕರಿ, ಮೀಸಲಾತಿ ಸೇರಿದಂತೆ ಸರ್ಕಾರದ ಎಲ್ಲ ಸೌಕರ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಇದನ್ನು ಖಂಡಸಿ 88 ದಿನಗಳಿಂದ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಆದರೆ, ಇದನ್ನೇ ನೆಪ ಮಾಡಿಕೊಂಡು ಹೋರಾಟ ಹತ್ತಿಕ್ಕಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕಚೇರಿಗಳಿಗೇ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದೂ ಹೇಳಿದರು.

ತಳವಾರ, ಪರಿವಾರ ಸಮುದಾಯ ಎಸ್.ಟಿ ಪ್ರಮಾಣ ಪತ್ರ ಕೊಡಲು ತಹಶೀಲ್ದಾರ್‌ಗಳು ಈಗಲೇ ಕ್ರಮ ಕೈಗೊಳ್ಳಬೇಕು. ಶಾಲಾ ದಾಖಲಾತಿಗಳನ್ನೇ ಆಧರಿಸಿ ಈ ಪ್ರಮಾಣ ಪತ್ರ ನೀಡಬಹುದು. ಅನುಮಾನ ಇದ್ದವರ ಮೇಲೆ ಪರಿಶೀಲನೆ ನಡೆಸಿ ಕೊಡಬೇಕು. ಒಂದುವೇಳೆ ಪ್ರಮಾಣ ಪತ್ರ ನೀಡಲು ಅವಕಾಶ ಇಲ್ಲ ಎನ್ನುವುದಾದರೆ ನಮಗೆ ಲಿಖಿತವಾಗಿ ಹೇಳಿಕೆ ಕೊಡಬೇಕು ಎಂದೂ ಆಗ್ರಹಿಸಿದರು.

ನಮ್ಮ ಮುಷ್ಕರ ಬೆಂಗಲಿಸಿ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು, ಹಿರಿಯರು, ಆಂಧ್ರ, ತೆಲಂಗಾಣ ರಾಜ್ಯದ ಹೋರಾಟಗಾರರು, ರಾಜಕೀಯ ಮುಖಂಡರು ಸಹ ಪಾಲ್ಗೊಳ್ಳಲಿದ್ದಾರೆ. ಇದೊಂದು ನಿರ್ಣಾಯಕ ಹೋರಾಟ ಎಂದು ಅವರು ಹೇಳಿದರು.

ಮುಖಂಡರಾದ ಶರಣ ಕೊತ್ತಲಪ್ಪ, ಮುತ್ಯಾ ತೊನಸನಹಳ್ಳಿ, ಸುನೀತಾ ತಳವಾರ, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಚಂದ್ರಕಾಂತ ಗಂವ್ಹಾರ, ಅನಿಲ ವಚ್ಚಾ, ರಾಜಣ್ಣ ಯಡ್ರಾಮಿ, ಚಂದ್ರಶೇಖರ ಜಮಾದಾರ, ಶರಣು ಕೋಳಿ, ಸಂಗಮೇಶ ತಳವಾರ, ವಿಜಯಕುಮಾರ ಹಾಬನೂರ, ಸಂತೋಷ ದೇಸಾಯಿ ಕಲ್ಲೂರ, ರವಿ ಶಾಬಾದ, ಬೆಳ್ಯಪ್ಪ ಕಣದಾಳ ಧರಣಿಯಲ್ಲಿ ಪಾಲ್ಗೊಂಡದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.